ಕರಾವಳಿ

ಭಟ್ಕಳದಲ್ಲಿ ಗುಡ್ಡ ಕುಸಿತದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ವಿತರಿಸಿದ ಸಿಎಂ ಬೊಮ್ಮಾಯಿ

Pinterest LinkedIn Tumblr

ಭಟ್ಕಳ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬುಧವಾರ ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತವಾದ ಸ್ಥಳಕ್ಕೆ ಕಂದಾಯ ಸಚಿವ ಆರ್.ಅಶೋಕ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಶಾಸಕಿ ರೂಪಾಲಿ ನಾಯ್ಕ್, ಶಾಸಕ ಸುನೀಲ್ ನಾಯ್ಕ್ ಜತೆ ಭೇಟಿ‌ ನೀಡಿದರು.

ಗುಡ್ಡ ಕುಸಿತದಿಂದ ಸಾವಿಗೀಡಾದ ಮುಟ್ಟಳ್ಳಿಯ ಮೃತ ಲಕ್ಷ್ಮೀ ನಾರಾಯಣ ನಾಯ್ಕ ಅವರ ಮನೆಯ ಸ್ಥಳವನ್ನು ವೀಕ್ಷಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ವಿತರಿಸಿದರು.

ಬಳಿಕ ಮಾತನಾಡಿದ ಸಿಎಂ, ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತದಿಂದ ಸಾವು ಕಂಡ ಕುಟುಂಬಸ್ಥರಿಗೆ ಸರಕಾರದಿಂದ ಪರಿಹಾರ ಮಾತ್ರವಲ್ಲ, ಅವರ ಮಕ್ಕಳ ಶಿಕ್ಷಣ, ಹಾಸ್ಟೆಲ್ ಸೌಲಭ್ಯದ ವೆಚ್ಚವನ್ನೂ ನೀಡಲಾಗುವುದು. ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಭೂಕುಸಿತವಾಗಲು ಲ್ಯಾಟರೇಟ್ ಮೈನಿಂಗ್ ಕಾರಣವಾಗಿದ್ದು, ಇನ್ನೂ ಎಂಟತ್ತು ಮನೆಗಳನ್ನು ಸ್ಥಳಾಂತರ ಮಾಡುವ ವ್ಯವಸ್ಥೆ ಮಾಡಲಾಗುವುದು. ಈ ಭಾಗದಲ್ಲಿ ಜಿಯೋಲಾಜಿಕಲ್ ಸರ್ವೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ. ಮಳೆಗೆ ಹಲವು ಮೀನುಗಾರಿಕಾ ಬೋಟುಗಳಿಗೆ, ಅಂಗಡಿಗಳಿಗೆ ಹಾನಿಯಾಗಿದ್ದು, ಇವುಗಳಿಗೆ ವಿಶೇಷ ಅನುದಾನ ನೀಡುತ್ತೇವೆ ಎಂದರು. ಇನ್ನು ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, 115 ಹಳ್ಳಿಗಳಿಗೆ ತೊಂದರೆಯಾಗಿದೆ. ತುಮಕೂರಿನಲ್ಲಿ ನಾಲ್ಕು ಸಾವು,, ವಿಜಯನಗರದಲ್ಲಿ ಒಂದು ಸಾವು ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ನಾಲ್ಕು ಸಾವಿನೊಂದಿಗೆ ರಾಜ್ಯದಲ್ಲಿ ಒಟ್ಟು 9 ಸಾವು ಸಂಭವಿಸಿದೆ.

ರಾಜ್ಯದಲ್ಲಿ ಒಟ್ಟು 600 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಭಟ್ಕಳದಲ್ಲಿ 9 ಪಕ್ಕಾ ಮನೆ, 50 ಮನೆಗಳು ಭಾಗಶಃ ಹಾನಿಯಾಗಿ 2175 ಮನೆಗಳಿಗೆ ನೀರು ನುಗ್ಗಿದೆ, ಸುಮಾರು 2000 ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಬೋಟುಗಳು ಕೂಡಾ ಹಾನಿಗೀಡಾಗಿವೆ. ಇವೆಲ್ಲದಕ್ಕೂ ಕೂಡಲೇ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ರಾಜ್ಯದ ವಿವಿಧೆಡೆ 21,431 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದು ಹೆಚ್ಚಾಗಲಿರೋದ್ರಿಂದ ಕೂಡಲೇ ಸರ್ವೆ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ವರದಿ ಬಂದ ತಕ್ಷಣ ಪರಿಹಾರ ಬಿಡುಗಡೆ ಮಾಡುತ್ತೇವೆ. ಇನ್ನು ರಾಜ್ಯದಲ್ಲಿ ಮೂಲಭೂತ ಸೌಕರ್ಯದ ಹಾನಿಗೆ 500 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಮೀನುಗಾರರ ಬೋಟು ಹಾನಿ ಸಂಬಂಧಿಸಿ ತಾಂತ್ರಿಕ ತಜ್ಞರ ವರದಿ ಪಡೆದು ವಿಶೇಷ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ವ್ಯವಸ್ಥೆ ಮಾಡಲಾಗುವುದು. ಮುಂದಿನ 7-8 ದಿನಗಳಲ್ಲಿ ಮತ್ತೆ ಜಿಲ್ಲೆಗೆ ಭೇಟಿ ನೀಡಿ ಆಸ್ಪತ್ರೆ ಕುರಿತಂತೆ ಘೋಷಣೆ ಮಾಡುತ್ತೇನೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಚರ್ಚಿಸಿ ವರದಿ ಪಡೆದುಕೊಳ್ಳುತ್ತೇನೆ. ಪ್ರಸ್ತುತ ಕೌನ್ಸಿಲಿಂಗ್‌ ಮೂಲಕ ವೈದ್ಯರು ಬೇರೆ ಬೇರೆ ಜಿಲ್ಲೆಗೆ ಹೋಗುತ್ತಾರೆ. ಅದು ಯಾಕೆ ಹೀಗೆ ನಡೆಯುತ್ತದೆ ಎಂದು ಪರಿಶೀಲನೆ ನಡೆಸಲಾಗುವುದು. ಮೆಡಿಕಲ್ ಕಾಲೇಜಿನಲ್ಲೇ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಇದರಿಂದ ವೈದ್ಯರು ಬೇರೆಡೆ ತೆರಳುವ ಸಾಧ್ಯತೆಗಳಿಲ್ಲ, ಇದರಿಂದ ವೈದ್ಯಕೀಯ ಸೌಲಭ್ಯಗಳೂ ದೊರೆಯುತ್ತದೆ ಎಂದು ಭಟ್ಕಳದ ಮುಟ್ಟಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

 

Comments are closed.