(ಚಿತ್ರ, ವರದಿ-ಯೋಗೀಶ್ ಕುಂಭಾಸಿ)
ಕುಂದಾಪುರ: ಸೋಮವಾರ ಮಧ್ಯಾಹ್ನದ ಬಳಿಕ ಆರಂಭಗೊಂಡ ಸಣ್ಣ ಪ್ರಮಾಣದ ಮಳೆ ಬಳಿಕ ಬಿರುಸು ಪಡೆದುಕೊಂಡು ಮಂಗಳವಾರ ಮುಂಜಾನೆ ವೇಳೆ ಮೇಘಸ್ಪೋಟದಂತೆ ಸಂಭವಿಸಿದ ಪರಿಣಾಮ ಬೈಂದೂರು ತಾಲೂಕಿನ ಶಿರೂರು ಬಹುತೇಕ ಜಲಾವೃತಗೊಂಡಿದ್ದು ಮೀನುಗಾರಿಕೆ ದೋಣಿಗಳ ನಷ್ಟ, ಆಸ್ತಿಪಾಸ್ತಿ ಸಹಿತ ಕೋಟ್ಯಾಂತರ ರೂಪಾಯಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಮೇಘಸ್ಪೋಟಗೊಂಡ ಪರಿಣಾಮ ಶಿರೂರು ವ್ಯಾಪ್ತಿಯಲ್ಲಿ ಈ ಸಮಸ್ಯೆ ಆಗಿದೆ ಎನ್ನಲಾಗಿದೆ. ಆಸುಪಾಸಿನ ಹೊಳೆಗಳು ಕೂಡ ಕೆಂಬಣ್ಣ ಮಿಶ್ರಿತವಾಗಿ ಉಕ್ಕಿ ಹರಿಯುತ್ತಿದ್ದು ಹೊಳೆಯಲ್ಲಿ ಒಮ್ಮೆಲೆ ನೀರು ಏರಿದ ಪರಿಣಾಮ ಶಿರೂರು ಪೇಟೆ, ಶಿರೂರು ಕೆಳಪೇಟೆ, ಹಡವಿನಕೋಣೆ, ಕುಂಬಾರಕೇರಿ, ಸಾಂತೋಡಿ ಸಹಿತ ಬಹುತೇಕ ಭಾಗಗಳು ಜಲಾವೃತಗೊಂಡಿದೆ.
ದೋಣಿಗಳು ಸಮುದ್ರ ಪಾಲು..
ಶಿರೂರಿನಲ್ಲಿ ನದಿ ಸಮೀಪ ಲಂಗರು ಹಾಕಿದ ಮೀನುಗಾರಿಕೆ ದೋಣಿಗಳು ಮಳೆಯಿಂದಾಗಿ ಸಮುದ್ರ ಪಾಲಾಗಿದೆ. ಬೈಂದೂರು ವಲಯದ 25ಕ್ಕೂ ಅಧಿಕ ದೋಣಿ, ಶಿರೂರು ವಲಯದಿಂದ 10ಕ್ಕೂ ಅಧಿಕ ದೋಣಿಗಳು ಕೊಚ್ಚಿಹೋಗಿದೆ. ಕಡಲಿನಲ್ಲಿ ತೇಲಿ ಬರುತ್ತಿರುವ ದೋಣಿಗಳನ್ನು 500ಕ್ಕೂ ಅಧಿಕ ಮೀನುಗಾರರು ಮೂರ್ನಾಲ್ಕು ಕ್ರೇನ್ ಹಾಗೂ ರೋಪ್ ಬಳಸಿ ಮೇಲಕ್ಕೆತ್ತುವ ಯತ್ನ ಮಾಡಿದರು. ದಡಕ್ಕೆ ಎಳೆದು ತಂದ ದೋಣಿಗಳು ಹಾನಿಗೀಡಾಗಿದ್ದು ಬಲೆ, ಎಂಜಿನ್,ಜಿ.ಪಿ.ಎಸ್, ವೈರ್ ಲೆಸ್ ಮೊದಲಾದ ಪರಿಕರಗಳು ಸಮುದ್ರದಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶಿಲ್ದಾರ್, ಮೀನುಗಾರಿಕಾ ಇಲಾಖಾಧಿಕಾರಿಗಳು ಆಗಮಿಸಿದ್ದಾರೆ.


ಮನೆಗಳಿಗೆ ನುಗ್ಗಿದ ನೀರು…
ಶಿರೂರು ಆಸುಪಾಸಿನಲ್ಲಿ 30ಕ್ಕೂ ಅಧಿಕ ಮನೆ ಜಲಾವೃತಗೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು ಗೃಹೋಪಯೋಗಿ ವಸ್ತುಗಳು, ದಾಖಲಾತಿಗಳು ಚೆಲ್ಲಾಪಿಲ್ಲಿಯಾಗಿ ಹಾನಿಗೀಡಾದ್ದರಿಂದ ಮನೆಮಂದಿ ಕಂಗಾಲಾಗಿದ್ದು ಕಣ್ಣೀರು ಹಾಕುತ್ತಿದ್ದಾರೆ. ಕೆಲ ಮನೆಗಳಲ್ಲಿ ಮಳೆ ನೀರು ನುಗ್ಗಿ ಕಾಗದ ಪತ್ರ, ದಾಖಲಾತಿಗಳು ಸಂಪೂರ್ಣ ಹಾನಿಗೀಡಾಗಿದೆ. ಶಿರೂರು ಸಾಂತೋಡಿ ಎಂಬಲ್ಲಿ ನಾಗಮ್ಮ, ಮಹಾಬಲ ಶೆಟ್ಟಿಯವರ ಮನೆ ಸಂಪೂರ್ಣ ಕುಸಿದಿದೆ. ಮನೆಯಲ್ಲಿ ಐದು ಮಂದಿ ಇದ್ದಿದ್ದು ವಿಪರೀತ ಮಳೆ ಬಂದ ಹಿನ್ನೆಲೆ ಪಕ್ಕದ ಮನೆಯವರು ಎಬ್ಬಿಸಿ ತಮ್ಮ ಮನೆಗೆ ಕರೆದೊಯ್ದ ಕಾರಣ ಜೀವ ಹಾನಿ ತಪ್ಪಿದೆ, ಮನೆಯೊಳಗಿದ್ದ ವಸ್ತುಗಳು ನಾಶವಾಗಿದೆ. ಇಲ್ಲಿಗೆ ಸಮೀಪದ ಕುಂಬಾರಕೇರಿಯಲ್ಲಿನ ಪಾರ್ವತಿ ಶೆಟ್ಟಿಯವರ ಮನೆಗೆ ನೀರು ನುಗ್ಗಿ ಪಾತ್ರೆಗಳು, ಪೀಟೋಪಕರಣಗಳು ಹಾಗೂ ಪ್ರಿಡ್ಜ್ ಸಹಿತ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದೆ. ಮನೆಯೊಳಗೆ ಕೆಸರು ಮಿಶ್ರಿತ ನೀರು ತುಂಬಿದ್ದು ಆರು ತಿಂಗಳ ಹಾಗೂ ಒಂದು ವರ್ಷದ ಮಗುವನ್ನು ರಕ್ಷಿಸಲಾಗಿದೆ. ಮಾತ್ರವಲ್ಲದೆ ಇವರ ಮನೆ ಎದುರಿನ ಕೊಟ್ಟಿಗೆ ಕುಸಿದು ಬಿದ್ದು 25 ಕೋಳಿಗಳು ಸಾವಿಗೀಡಾಗಿದ್ದು ಜಾನುವಾರುಗಳು ಪಾರಾಗಿದೆ. ಶಿರೂರು ಮಾರ್ಕೇಟ್ ಬಳಿ ರೈಲು ಬ್ರಿಡ್ಜ್ ಸಮೀಪದ ನಿವಾಸಿ ಅಶೋಕ್ ಪ್ರಭು ಮನೆ ಬಳಿ ಏಕಾಏಕಿ ಮಳೆ ನೀರು ನುಗ್ಗಿ ಮನೆ , ದ್ವಿಚಕ್ರ ವಾಹನ ಸಂಪೂರ್ಣ ಮುಳುಗಡೆಯಾಗಿದೆ. ಶಿರೂರು ಆಸುಪಾಸಿನಲ್ಲಿ ಬಹುತೇಕ ರಸ್ತೆಗಳು ಹಾನಿಯಾಗಿದೆ.

ಉಡುಪಿ ಡಿಸಿ ಭೇಟಿ..
ನೆರೆ ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಅಗ್ನಿಶಾಮಕದಳದ ದೋಣಿ ಬಳಸಲಾಗಿತ್ತು. ಮಂಗಳವಾರ ಬೆಳಿಗ್ಗೆ 10 ಗಂಟೆ ಹೊತ್ತಿಗೆ 30 ಮನೆಗಳಿಂದ 150ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದ್ದು 2 ಕಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ನೆರೆ ಬಂದು ಹಾನಿಗೀಡಾದ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಭೇಟಿ ನೀಡಿದ್ದು ಶಿರೂರು ಗ್ರಾ.ಪಂನಲ್ಲಿ ಸಭೆ ನಡೆಸಿ ತಕ್ಷಣದಿಂದ ಸುರಕ್ಷತಾ ಕ್ರಮ ಮತ್ತು ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಕೆಲಸ ಮಾಡಿ ಸಂಭವ್ಯ ಅನಾಹುತ ತಪ್ಪಿಸಿದ್ದು ಸಂತ್ರಸ್ಥರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದರು. ಈ ಸಂದರ್ಭ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ತಹಶಿಲ್ದಾರ್ ಕಿರಣ್ ಗೌರಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಶಿರೂರು ಗ್ರಾ.ಪಂ. ಅಧ್ಯಕ್ಷೆ ಜಿ.ಯು ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಸದಸ್ಯರಾದ ಖಾಪ್ಸಿ ನೂರ್ ಮಹಮ್ಮದ್, ಮುಖ್ರಿ ಅಲ್ತಾಪ್, ಫಾರುಖ್, ಉದಯ ಪೂಜಾರಿ, ಅರವಿಂದ, ಪಿಡಿಒ ರಾಜೇಂದ್ರ, ಕಂದಾಯ, ಆರೋಗ್ಯ ಇಲಾಖೆ, ಪೊಲೀಸ್, ಅಗ್ನಿಶಾಮಕ ಸಹಿತ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿದರು. ಗಂಗೊಳ್ಳಿ 24*7 ಆಪತ್ಬಾಂಧವ ಅಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ, ತಂಡದ ಸದಸ್ಯರಾದ ನದೀಮ್, ಫೈರೋಜ್, ನತಹರ್,ತಾಝೀಮ್ ಬೆಳಿಗ್ಗೆ 6.30ರಿಂದ ಶಿರೂರು ಭಾಗದಲ್ಲಿ ಅಧಿಕಾರಿಗಳೊಂದಿಗಿದ್ದು ರಕ್ಷಣಾ ಕಾರ್ಯಾಚರಣೆ, ಜನರ ಸ್ಥಳಾಂತರದಲ್ಲಿ ಸಹಕಾರ ನೀಡಿದರು.
ತಹಶಿಲ್ದಾರ್ ಕಾರ್ಯಕ್ಕೆ ಮೆಚ್ಚುಗೆ..
ಬೈಂದೂರು ತಹಶಿಲ್ದಾರ್ ವರ್ಗಾವಣೆ ಬಳಿಕ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಅವರು ಪ್ರಭಾರವಾಗಿ ಬೈಂದೂರು ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಂಗಳವಾರ ಮುಂಜಾನೆ 4 ಗಂಟೆ ಹೊತ್ತಿಗೆ ಮಳೆ ಸಮಸ್ಯೆ ಬಗ್ಗೆ ಕರೆ ಬಂದಾಕ್ಷಣ ಕುಂದಾಪುರದಿಂದ ಬೈಂದೂರಿನತ್ತ ತೆರಳಿದ ಅವರು ತಮ್ಮ ಸಿಬ್ಬಂದಿಗಳನ್ನು ಕರೆಸಿಕೊಂಡು ರಕ್ಷಣಾ ಕೆಲಸ ಹಾಗೂ ಮುಂಜಾಗ್ರತಾ ಕೆಲಸಕ್ಕೆ ಮುಂದಾಗಿ ಸಮಸ್ಯೆಯಿರುವ ಮನೆಗಳಿಗೆ ತೆರಳಿ ಜನರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ತೊಡಗಿಸಿಕೊಂಡರು. ಮಾನವ ಜೀವಹಾನಿ ತಪ್ಪಿಸುವಲ್ಲಿ ತಹಶಿಲ್ದಾರ್ ವಹಿಸಿದ ಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸಹಿತ ಸಾರ್ವಜನಿಕರು ಪ್ರಶಂಸಿಸಿದ್ದಾರೆ. ತಹಶಿಲ್ದಾರ್ ಜೊತೆಗೆ ಕಂದಾಯ ಇಲಾಖೆಯ ಅಧಿಕಾರಿಗಳ ಸಹಿತ ಸ್ಥಳೀಯರು ಸಹಕಾರ ನೀಡಿದ್ದರು.
ದೋಣಿ ಕೊಚ್ಚಿಹೋಗಿ ಕೋಟ್ಯಾಂತರ ರೂ. ನಷ್ಟ
ಈ ವರ್ಷ ನಾಡ ದೋಣಿ ಮೀನುಗಾರಿಕೆ ಪ್ರಾರಂಭದಲ್ಲೇ ವಿಳಂಭವಾಗಿ ಮೀನುಗಾರಿಕೆಯಿಲ್ಲದೆ ನಷ್ಟ ಅನುಭವಿಸುತ್ತಿರುವ ಸಂದರ್ಭ ಲಂಗರು ಹಾಕಿದ ದೋಣಿಗಳು ಪೃಕೃತಿಯ ಮೇಘಸ್ಫೋಟದಿಂದ ಬೈಂದೂರು ವಲಯ ಹಾಗೂ ಶಿರೂರು ವಲಯ ಭಾಗದಿಂದ 35-40 ದೋಣಿಗಳು ಹೊಳೆಯ ಮೂಲಕ ಸಮುದ್ರದಲ್ಲಿ ಕೊಚ್ಚಿಹೋಗಿದ್ದು ಬಹಳಷ್ಟು ದೋಣಿಗಳು ಇನ್ನೂ ಸಿಕ್ಕಿಲ್ಲ. ದಡಕ್ಕೆ ಅಪ್ಪಳಿಸಿದ ದೋಣಿಗಳು, ಬಲೆ, ಎಂಜಿನ್ ಮೊದಲಾದ ಪರಿಕರ ನಾಶವಾಗಿ ಕೋಟ್ಯಾಂತರ ರೂ. ನಷ್ಟವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡುವ ಮೂಲಕ ಮೀನುಗಾರರ ಕಷ್ಟಕ್ಕೆ ಸ್ಪಂದಿಸಬೇಕು. ನಾಡ ದೋಣಿ ಮಾಟು ಬಲೆ ತಂಡದಲ್ಲಿ ಮೂರು ದೋಣಿಗಳಿರುತ್ತದೆ. ಐದಾರು ತಂಡದ 20 ದೋಣಿಗಳು ಇರುತ್ತದೆ. ಎಲ್ಲವೂ ಹಾನಿಯಾಗಿದ್ದು ಅಂದಾಜು 10 ಕೋಟಿಗೂ ಅಧಿಕ ನಷ್ಟವಾಗಿದೆ.
-ಆನಂದ ಖಾರ್ವಿ, (ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ)
ಕಣ್ಣೀರಿಟ್ಟ ಜನರು…
ಮನೆಯೊಳಕ್ಕೆ ಆಳತ್ತೆರದ ನೀರು ನಿಂತಿತ್ತು. 6 ತಿಂಗಳ ಹಾಗೂ 1 ವರ್ಷದ ಮಗುವಿತ್ತು. ನಾವು ಮಕ್ಕಳನ್ನು ಬಚಾವ್ ಮಾಡಿ ಸಮೀಪದ ಮನೆಗೆ ಕಳಿಸಿದೆವು. ಮನೆಯೆದುರು ಕೊಟ್ಟಿಗೆ ಕುಸಿದು ಕೋಳಿಗಳು ಸತ್ತವು. ಕಾರ್ಯಾಚರಣೆ ತಂಡ ಬಂದು ಜಾನುವಾರು ರಕ್ಷಿಸಿದರು.
ಮನೆಯೊಳಗಿನ ಪರಿಕರಗಳು ಹಾಳಾಗಿದೆ. ಈಗ ಮನೆ ನೋಡಿದರೆ ತುಂಬಾ ನೋವಾಗುತ್ತಿದೆ. 5-6 ಕ್ವಿಂಟಾಲ್ ಅಕ್ಕಿ, ಆಹಾರ ಸಾಮಾಗ್ರಿ ನಾಶವಾಗಿದೆ. ಮನೆಯೊಳಕ್ಕೆ ಕೆಸರು ನೀರು ನಿಂತಿದ್ದು ಸರಿಪಡಿಸಲು ಎರಡು ದಿನ ಬೇಕಾಗಬಹುದು.
– ನಯನಾ ಶೆಟ್ಟಿ (ಶಿರೂರು ಕುಂಬಾರಕೇರಿ ನಿವಾಸಿ)
ರಾತ್ರಿ 3.30ಕ್ಕೆ ಮಳೆ ಬಂತು. ಮಲಗಿದ್ದಾಗ ಮಂಚ ತೇಲಿದ್ದರಿಂದ ಗಮನಕ್ಕೆ ಬಂತು. ನನಗೆ ಈಗ 62 ವರ್ಷ ವಯಸ್ಸಾಗಿದೆ. ಇಂತಹ ಮಳೆ ನೋಡಿಲ್ಲ. ಮನೆಯೊಳಕ್ಕೆ ನೀರು ನುಗ್ಗಿ ಅಕ್ಕಿ, ಗೃಹೋಪಯೋಗಿ ವಸ್ತುಗಳು, ವ್ಯಾಪಾರಕ್ಕಾಗಿಟ್ಟ ಹಪ್ಪಳ, ಹಣ ಎಲ್ಲವೂ ಸಂಪೂರ್ಣ ನಾಶವಾಗಿದೆ. ಆಧಾರ್, ಪಾನ್ ಕಾರ್ಡ್ ಸಹಿತ ಎಲ್ಲವನ್ನೂ ಕಳೆದುಕೊಂಡಿದ್ದೇವೆ.
– ಅಶೋಕ್ ಪ್ರಭು (ಶಿರೂರು ನಿವಾಸಿ)
ಶಿರೂರಿನಲ್ಲಿ ತುಂಬಾ ಕಮ್ಮಿ ಸಮಯದಲ್ಲಿ 250 ಮಿ.ಮಿ ಜಾಸ್ಥಿ ಮಳೆಯಾಗಿದೆ. ಮುಂಜಾನೆ 3ರಿಂದ 6 ಗಂಟೆಯವರೆಗೆ ಮಳೆ ಹೆಚ್ಚಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಎಸಿ, ಡಿವೈಎಸ್ಪಿ, ತಹಶಿಲ್ದಾರ್ ಸಹಿತ ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಕೆಲವು ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ನದಿ ತೀರ, ಅಪಾಯಕಾರಿ ಪ್ರದೇಶದಲ್ಲಿ ಜನರು ಮುಂಜಾಗೃತೆ ವಹಿಸಲು ಸೂಚಿಸಲಾಗಿದೆ. 2 ಕಾಳಜಿ ಕೇಂದ್ರ ಸಿದ್ಧ ಮಾಡಲಾಗಿದೆ. ಮೀನುಗಾರಿಕೆ ದೋಣಿ, ಬಲೆಗಳು ಕೊಚ್ಚಿಹೋಗಿ ನಷ್ಟವಾದ ಬಗ್ಗೆ ಮಾಹಿತಿಯಿದ್ದು ಸಂಬಂದಪಟ್ಟ ಇಲಾಖಾಧಿಕಾರಿಗಳಿಗೆ ತಿಳಿಸಿ ಪರಿಹಾರದ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅಗ್ನಿಶಾಮಕ ಹಾಗೂ ಗೃಹರಕ್ಷಕ ದಳದವರ 8 ಬೋಟ್ ಸಿದ್ಧವಿದ್ದು ರಕ್ಷಣಾ ಕಾರ್ಯ ಮಾಡಿದ್ದಾರೆ. ಸ್ಥಳೀಯರು, ಸಂಘಸಂಸ್ಥೆಗಳು ಹಾಗೂ ಅಧಿಕಾರಿಗಳ ಸಮನ್ವಯತೆಯಲ್ಲಿ ಕಾರ್ಯಾಚರಣೆ ನಿರ್ವಹಿಸಲಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಕೆಲವು ಕಡೆ ಸಮಸ್ಯೆಯಾದ ಬಗ್ಗೆ ಮಾಹಿತಿ ಬಂದಿದ್ದು ಮಕ್ಕಳ ಸುರಕ್ಷತೆ ಗಮನದಲ್ಲಿರಿಸಿಕೊಂಡು ಕ್ರಮವಹಿಸಲು ಸಂಬಂಧಪಟ್ಟ ಶಾಲೆಗಳಿಗೆ ಸೂಚಿಸಲಾಗುತ್ತದೆ.
– ಕೂರ್ಮಾರಾವ್ ಎಂ. (ಉಡುಪಿ ಜಿಲ್ಲಾಧಿಕಾರಿ)
Comments are closed.