ಕರಾವಳಿ

ಮಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿ ಅರೆಸ್ಟ್; 92 ಸಾವಿರ ಮೌಲ್ಯದ ವಸ್ತು ವಶ

Pinterest LinkedIn Tumblr

ಮಂಗಳೂರು: ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾವನ್ನು ಹೊಂದಿದ ಕುಖ್ಯಾತ ಆರೋಪಿ ಹಾಗೂ ಆತನ ಪತ್ನಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಿಖ್ಯಾತ್ @ ವಿಕ್ಕಿ ಬಪ್ಪಾಲ್ (28) ಮತ್ತು ಆತನ ಪತ್ನಿ ಅಂಜನಾ (21) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಬಿ ರವರ ನೇತ್ರತ್ವದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ನಗರದ ಕಾವೂರು ಶಂಕರ ನಗರ ಕೆ ಸಿ ಆಳ್ವ ಲೇಔಟ್ ನ ಮನೆಯೊಂದಕ್ಕೆ ದಾಳಿ ನಡೆಸಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಬಂಧಿತರಿಂದ ಒಟ್ಟು 2,200 ಕೆ.ಜಿ ತೂಕದ ರೂ. 22,000 ಮೌಲ್ಯದ ಗಾಂಜಾ, ನಗದು ರೂ. 1,500 ಮೊಬೈಲ್ ಫೋನ್-1 ಮತ್ತು ಡಿಜಿಟಲ್ ತೂಕದ ಮಾಪನವನ್ನು ವಶಪಡಿಸಿಕೊಳ್ಳಲಾಗಿದ್ದು
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 92,000 ಆಗಿದೆ. ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳನ್ನು ಮಾದಕ ವಸ್ತುಗಳ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿದೆ. ಆರೋಪಿಗಳ ಪೈಕಿ ವಿಖ್ಯಾತ್ ಎಂಬಾತನ ವಿರುದ್ದ ಈ ಹಿಂದೆ ಮಂಗಳೂರು ನಗರದ ದಕ್ಷಿಣ, ಉತ್ತರ, ಬರ್ಕೆ, ಉರ್ವಾ, ಗ್ರಾಮಾಂತರ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಾಗೂ ಕಿಡ್ನಾಫ್ ಸಂಬಂಧಪಟ್ಟಂತೆ ಒಟ್ಟು 13 ಪ್ರಕರಣಗಳು ದಾಖಲಾಗಿದೆ.

ಇನ್ನು ಅಂಜನಾ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಹಾಗೂ ಆತನ ಪತ್ನಿ ಜೊತೆ ಸೇರಿಕೊಂಡು ಮಂಗಳೂರು ನಗರದ ಎಂ ಜಿ ರಸ್ತೆಯಲ್ಲಿರುವ ವಿದ್ಯಾಸಂಸ್ಥೆಗಳ ಪರಿಸರದಲ್ಲಿ, ಕೆಪಿಟಿ, ಕದ್ರಿ, ಜೆಪ್ಪು ಬಪ್ಪಾಲ್ ಪರಿಸರದಲ್ಲಿ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Comments are closed.