ಕರಾವಳಿ

ಮಳೆಗಾಲದಲ್ಲಿ ತೆಕ್ಕಟ್ಟೆ ಕುದ್ರುಬೈಲು ಜಲಾವೃತ; ಜಾನುವಾರು ಮತ್ತು ಸ್ಥಳೀಯರ ರಕ್ಷಣೆಗೆ ಮುಂದಾದ ಭಜರಂಗದಳ..!

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರುಬೆಟ್ಟು ಪರಿಸರ ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಿಶ್ವಹಿಂದೂ ಪರಿಷತ್ ಬಜರಂಗದಳ ತೆಕ್ಕಟ್ಟೆ ಘಟಕದ ಕಾರ‍್ಯಕರ್ತರ ಸಹಕಾರದಿಂದ ಸ್ಥಳೀಯರನ್ನು ಹಾಗೂ ಜಾನುವಾರಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಿದ ಕಾರ‍್ಯ ಕುದ್ರುಬೈಲು ಪರಿಸರದಲ್ಲಿ ನಡೆದಿದ್ದು ಬಾರೀ ಪ್ರಶಂಸೆಗೆ ಕಾರಣವಾಗಿದೆ.

ತೆಕ್ಕಟ್ಟೆಯ ಕುದ್ರುಬೈಲು ಪರಿಸರದ ಮೇಲ್ತಾರು ಮನೆ ಮತ್ತು ಕುದ್ರುಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೆರೆ ನೀರು ನುಗ್ಗಿ ಮನೆಯ ದಿನೋಪಯೋಗಿ ವಸ್ತುಗಳು ನೀರು ಪಾಲಾಗಿತ್ತು. ಸಮೀಪದ ನೂರಾರು ಎಕರೆ ಕೃಷಿಭೂಮಿಗಳು ಜಾಲವೃತಗೊಂಡು ಬೆಳೆದ ಕೃಷಿ ಸಂಪೂರ್ಣ ಕೊಳೆತು ಹೋಗಿದ್ದು ಅಪಾರ ಹಾನಿ ಸಂಭವಿಸಿತ್ತು.

ಕುದ್ರುಬೈಲು ಪರಿಸರದಲ್ಲಿ ಆವೆ ಮಣ್ಣಿನ ಹೊಂಡವಲ್ಲದೇ ಹೊಳೆ ಸಾಲಿನ ದಂಡೆ ಒಡೆದು ಬೃಹತ್ ಪ್ರಮಾಣದಲ್ಲಿ ನೆರೆ ನೀರು ನುಗ್ಗಿ ಹೆಚ್ಚಿನ ಅನಾಹುತ ಸಂಭವಿಸಿದ್ದು ಈ ಪರಿಸರದಲ್ಲಿ ಸರಿಯಾದ ಯಾವುದೇ ರಸ್ತೆಗಳ ಸೌಕರ್ಯಗಳಿಲ್ಲದೇ ಸ್ಥಳೀಯರು ರಕ್ಷಣೆಗಾಗಿ ಕೃತಕ ನೆರೆಯಿಂದ ಪರಾದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೃತಕ ನೆರೆಯ ಹೊಡೆತಕ್ಕೆ ಸದಾಶಿವ ಶೆಟ್ಟಿ, ರವೀಂದ್ರ ಶೆಟ್ಟಿ, ವಸಂತ್ ದೇವಾಡಿಗ, ವಸಂತ್ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸೀತಾರಾಮ ದೇವಾಡಿಗ, ನಾಗೇಶ್ ದೇವಾಡಿಗ, ಹೆರಿಯ ಕಾಂಚನ್, ಸೂರ್ಯ ಶೆಟ್ಟಿ ಸೇರಿದಂತೆ ಇನ್ನಿತರ ಹಲವು ಮಂದಿ ಕೃಷಿಕರ ಕೃಷಿಭೂಮಿ ಹಾನಿಗೀಡಾದ ಘಟನೆ ಸಂಭವಿಸಿತ್ತು.

*ಮಾನವೀಯತೆ ಮೆರೆದ ಬಜರಂಗದಳ*
ತೆಕ್ಕಟ್ಟೆಯ ಕುದ್ರುಬೈಲು ಪರಿಸರದಲ್ಲಿ ಒಂದೇ ಸಮನೇ ಏರುತ್ತಿದ್ದ ನೆರೆ ನೀರಿನ ಹಾವಳಿಗೆ ಸ್ಥಳೀಯ ವಿಶ್ವಹಿಂದೂ ಪರಿಷತ್ ಬಜರಂಗದಳ ತೆಕ್ಕಟ್ಟೆ ಘಟಕ ತುರ್ತು ಸ್ಪಂದಿಸಿ ಜೀವದ ಹಂಗು ತೊರೆದು ಸ್ಥಳೀಯರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಮಾನವೀಯತೆ ಮೆರೆದಿರುವ ಕಾರ‍್ಯಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಬಜರಂಗದಳದ ಶ್ರೀನಾಥ್ ಶೆಟ್ಟಿ, ರವೀಂದ್ರ ಶೆಟ್ಟಿ, ವಸಂತ್ ದೇವಾಡಿಗ, ದರ್ಶನ್, ದಿನೇಶ್, ಕಾರ್ತಿಕ್, ನಿರಂಜನ್, ವಿನೋದ ದೇವಾಡಿಗ, ಕಿರಣ್, ಗಣೇಶ್ ತೆಕ್ಕಟ್ಟೆ ಹಾಗೂ ಹಿಂದೂ ಸಂಘಟನೆಯ ಕಾರ‍್ಯಕರ್ತರು ಈ ರಕ್ಷಣಾ ಕಾರ‍್ಯಚಾರಣೆಯಲ್ಲಿ ಕೈಜೊಡಿಸಿದ್ದರು.

ಒಟ್ಟಿನಲ್ಲಿ ಸೇವೆಯ ಕಲ್ಪನೆಯಲ್ಲಿ ಹುಟ್ಟಿಕೊಂಡ ಹಿಂದೂ ಸಂಘಟನೆ ನೆರೆಯಂತಹ ಪ್ರಾಕೃತಿಕ ವಿಕೋಪದ ಸಂದರ್ಭ ಜೀವದ ಹಂಗು ತೊರೆದು ಜನ-ಜಾನುವಾರನ್ನು ಕಾಪಾಡಿರುವುದು ಸಂಘಟನೆ ಉದ್ದೇಶದ ಸಾರ್ಥಕತೆಯಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.