ಕರ್ನಾಟಕ

ಬೆಳ್ಳಂಬೆಳಿಗ್ಗೆ ಶಾಸಕ ಜಮೀರ್ ಅಹಮ್ಮದ್ ಖಾನ್ ಮನೆ, ಫ್ಲ್ಯಾಟ್, ಕಚೇರಿ ಸಹಿತ 5 ಸ್ಥಳಗಳಿಗೆ ಎಸಿಬಿ ದಾಳಿ

Pinterest LinkedIn Tumblr

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಮಂಗಳವಾರ ಬೆಳ್ಳಂಬೆಳಿಗ್ಗೆ ಐದು ಸ್ಥಳಗಳ ಮೇಲೆ ದಾಳಿಮಾಡಿ, ಶೋಧ ನಡೆಸುತ್ತಿದೆ.

ಜಾರಿ ನಿರ್ದೇಶನಾಲಯ (ಈಡಿ) ನೀಡಿರುವ ವರದಿ ಆಧರಿಸಿ ಜಮೀರ್‌ ಅಹಮ್ಮದ್‌ ವಿರುದ್ಧ ಎಸಿಬಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದು ನಗರದ ಐದು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಸಮೀಪ ಇರುವ ಜಮೀರ್‌ ಅಹಮ್ಮದ್‌ ಅವರ ಮನೆ, ಸಿಲ್ವರ್‌ ಓಕ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌, ಸದಾಶಿವನಗರದಲ್ಲಿರುವ ಅತಿಥಿಗೃಹ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್‌ ಟ್ರಾವೆಲ್ಸ್‌ ಕಚೇರಿಯಲ್ಲಿ ಶೋಧ ನಡೆಸುತ್ತಿರುವ ಎಸಿಬಿ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.

2021ರ ಆಗಸ್ಟ್‌ 5ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್‌ ಅಹಮ್ಮದ್‌ ಅವರ ಮನೆ, ಕಚೇರಿಗಳ ಮೇಲೆ ದಾಳಿಮಾಡಿ ಶೋಧ ನಡೆಸಿದ್ದರು.

ಅಕ್ಟೋಬರ್‌ನಲ್ಲಿ ಶಾಸಕರಿಗೆ ನೋಟಿಸ್‌ ಜಾರಿಮಾಡಿದ್ದ ತನಿಖಾ ಸಂಸ್ಥೆ, ದೆಹಲಿಗೆ ಕರೆಸಿಕೊಂಡು ವಿಚಾರಣೆಯನ್ನೂ ನಡೆಸಿತ್ತು. ಜಾರಿ ನಿರ್ದೇಶನಾಲಯ ಸಿದ್ಧಪಡಿಸಿರುವ ವರದಿಯ ಆಧಾರದಲ್ಲಿ ಜಮೀರ್‌ ಅಹಮ್ಮದ್‌ ವಿರುದ್ಧ ಎಸಿಬಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ ಎನ್ನಲಾಗಿದೆ.

Comments are closed.