(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಭಾನುವಾರ ಮುಂಜಾನೆ ವೇಳೆ ಮರವಂತೆ ಸಮುದ್ರಕ್ಕೆ ಸ್ವಿಪ್ಟ್ ಕಾರು ಉರುಳಿಬಿದ್ದ ಘಟನೆಯಲ್ಲಿ ಕುಂದಾಪುರ ಬೀಜಾಡಿ ನಿವಾಸಿ 30 ವರ್ಷ ಪ್ರಾಯದ ವಿರಾಜ್ ಮೃತಪಟ್ಟಿದ್ದು, ಕಾರಿನಲ್ಲಿದ್ದ ಕುಂದಾಪುರ ಕಾಡಿನಕೊಂಡ ನಿವಾಸಿ 23 ವರ್ಷದ ರೋಶನ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಕೊಚ್ಚಿಹೋಗಿದ್ದು ಸತತ ಹುಡುಕಾಟ ನಡೆದಿತ್ತು. ಸೋಮವಾರ ಸಂಜೆ ಹೊತ್ತಿಗೆ ರೋಶನ್ ಮೃತದೇಹ ತ್ರಾಸಿ-ಹೊಸಾಡು ಸಮೀಪದ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.
ಮೃತ ಯುವಕ ಕುಂದಾಪುರ ಕಾಡಿನಕೊಂಡದ ನಿವಾಸಿ ನಾರಾಯಣ ಆಚಾರ್ ಅವರ ಪುತ್ರ ರೋಶನ್ ಆಚಾರ್ (24). ಇವರು ತಂದೆಯೊಂದಿಗೆ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಘಟನೆ ನಡೆದ ತರುವಾಯ ಭಾನುವಾರ ಬೆಳಿಗ್ಗೆನಿಂದ ರೋಶನ್ ಗೆ ರಾತ್ರಿವರೆಗೂ ವ್ಯಾಪಕ ಶೋಧ ನಡೆಸಿದ್ದು ನಂತರ ಸೋಮವಾರವೂ ರೋಶನ್ ಪತ್ತೆಗೆ ಹುಡುಕಾಟ ಮುಂದುವರೆಸಲಾಗಿತ್ತು, ಸ್ಕೂಬ್ ಡ್ರೈವ್ ನಿಪುಣ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು.
(ಮರವಂತೆ ಕಾರು ಅಪಘಾತದಲ್ಲಿ ಮೃತರಾದ ವಿರಾಜ್, ರೋಶನ್)
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್ಐ ವಿನಯ್ ಎಂ ಕೊರ್ಲಹಳ್ಳಿ, ಮುಳುಗು ತಜ್ಞ ದಿನೇಶ್ ಗಂಗೊಳ್ಳಿ, ಸ್ಥಳೀಯರ ಸಹಿತ ರೋಶನ್ ಕುಟುಂಬಿಕರು, ಸ್ನೇಹಿತರು ಮರವಂತೆ ಬಳಿ ಮೊಕ್ಕಾಂ ಇದ್ದರು.
ಘಟನೆ ಹಿನ್ನೆಲೆ..
ಕುಂದಾಪುರ ಕಡೆಯಿಂದ ಕುಮಟಾದತ್ತ ಸಾಗುತ್ತಿದ್ದ ನಾಲ್ವರಿದ್ದ ಸ್ವಿಪ್ಟ್ ಕಾರು ಚಾಲಕನಾದ ವಿರಾಜ್ ಆಚಾರ್ ಅವರ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅರಬ್ಬಿ ಸಮುದ್ರಕ್ಕೆ ಬಿದ್ದ ಪರಿಣಾಮ ಕಾರಿನೊಳಗಿದ್ದ ಚಾಲಕ ವಿರಾಜ್ ಸಾವನ್ನಪ್ಪಿದ್ದು, ರೋಶನ್ ನೀರಿನಲ್ಲಿ ಕೊಚ್ಚಿ ಹೋಗಿದ್ದು ಕಾರ್ತಿಕ್ ಆಚಾರ್ ಹಾಗೂ ಸಂದೇಶ್ ಪ್ರಾಣಾಪಾಯದಿಂದ ಪಾರಾಗಿದ್ದರು. ಭಾನುವಾರ ಮುಂಜಾನೆ ಹರಸಾಹಸಪಟ್ಟು ಸಮುದ್ರದಿಂದ ಕಾರನ್ನು ಮೇಲಕ್ಕೆತ್ತಲಾಯಿತು. ಈ ವೇಳೆ ಸೀಟ್ ಬೆಲ್ಟ್ ಧರಿಸಿದ್ದ ಸ್ಥಿತಿಯಲ್ಲಿ ವಿರಾಜ್ ಮೃತದೇಹ ಕಾರಿನೊಳಕ್ಕೆ ಪತ್ತೆಯಾಗಿತ್ತು. ಪಲ್ಟಿಯಾಗಿದ್ದರಿಂದ ಹಾಗೂ ಸಮುದ್ರದ ಬ್ರಹತ್ ಅಲೆಗಳಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.
Comments are closed.