ಕರಾವಳಿ

ಮಂಗಳೂರು ಪೊಲೀಸ್ ಕಮಿಷನರ್‌ ಭೇಟಿಯಾದ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್‌

Pinterest LinkedIn Tumblr

ಮಂಗಳೂರು: ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಅವರನ್ನು ಬುಧವಾರ ಭೇಟಿಯಾಗಿ ಮಾಹಿತಿ ಹಂಚಿಕೊಂಡರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಜೀವಕ್ಕೆ ಅಪಾಯ ಇರುವ ಬಗ್ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಈ ಪ್ರಕರಣವನ್ನು ಮಂಗಳೂರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಗಾಗಿ ಪೊಲೀಸ್‌ ಕಮಿಷನರ್‌ ಹಾಗೂ ಇತರ ಅಧಿಕಾರಿಗಳನ್ನು ಭೇಟಿಯಾಗಿದ್ದೆ. ಅವರು ತನಿಖೆಗೆ ಅಗತ್ಯವಿರುವ ಕೆಲವು ಮಾಹಿತಿಗಳನ್ನು ನನ್ನಿಂದ ಪಡೆದುಕೊಂಡಿದ್ದಾರೆ.

ನನಗೆ ಜೀವ ಬೆದರಿಕೆ ಒಡ್ಡಿರುವುದು ನಿರ್ದಿಷ್ಟವಾಗಿ ಇಂತಹದ್ದೇ ವ್ಯಕ್ತಿ ಎಂದು ನಾನು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ವಿಚಾರಗಳೂ ಸ್ಪಷ್ಟವಾಗಲಿವೆ. ಈ ಪ್ರಕರಣದಲ್ಲಿ ಮನ್ವಿತ್‌ ರೈ ಕೈವಾಡ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಮನ್ವಿತ್ ರೈ ನನ್ನ ಪರಿಚಯದ ವ್ಯಕ್ತಿ. ಈ ಪ್ರಕರಣದಲ್ಲಿ ಅವರ ಹೆಸರು ಏಕೆ ಪ್ರಸ್ತಾಪವಾಗಿದೆಯೋ ಗೊತ್ತಿಲ್ಲ. ಈ ಬಗ್ಗೆ ಅವರೇ ಉತ್ತರ ಕೊಡಬೇಕು. ಈ ಬಗ್ಗೆ ಮನ್ವಿತ್‌ ರೈ ಖುದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರು ಏಕೆ ಕೊಟ್ಟರೋ ಗೊತ್ತಿಲ್ಲ. ಅದಕ್ಕೆ ಅವರೇ ಉತ್ತರ ಕೊಡಬೇಕು. ನಾನು ಯಾವುದೇ ಹೆಸರನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸರು ಎಲ್ಲ ಆಯಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಒಡ್ಡಿದವರು ಯಾರೇ ಆಗಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದರು.

 

Comments are closed.