ಕರಾವಳಿ

ಸಕಲ‌ ಸರ್ಕಾರಿ ಗೌರವದೊಂದಿಗೆ ಎ.ಜಿ. ಕೊಡ್ಗಿಯವರ ಅಂತ್ಯಕ್ರಿಯೆ; ಜನಪ್ರತಿನಿಧಿಗಳು, ಗಣ್ಯರ ಸಹಿತ ಸಾವಿರಾರು ಮಂದಿಯಿಂದ ಅಂತಿಮ ದರ್ಶನ

Pinterest LinkedIn Tumblr

ಕುಂದಾಪುರ: ಅನಾರೋಗ್ಯದಿಂದ ಮೃತಪಟ್ಟಿದ್ದ ಮಾಜಿ ಶಾಸಕ, ಹಿರಿಯ ಮುತ್ಸದ್ದಿ ಎ.ಜಿ.ಕೊಡ್ಗಿ (93) ಅಂತ್ಯಸಂಸ್ಕಾರವು ಮಂಗಳವಾರ ಅವರ ಊರಾದ ಅಮಾಸೆಬೈಲಿನಲ್ಲಿ ನಡೆಯಿತು.

       

ಹಿರಿಯ ನಾಯಕನ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದ್ದು‌ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು, ಊರಿನವರು, ಅಭಿಮಾನಿಗಳು ಅಂತಿಮ ನಮನ‌ ಸಲ್ಲಿಸಿದ್ದರು. ಅಂತ್ಯಸಂಸ್ಕಾರಕ್ಕೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಅವಕಾಶವನ್ನು ಅಮಾಸೆಬೈಲಿನ ಮನೆ ಸಮೀಪದ ಗೇರುಬೀಜ ಕಾರ್ಖಾನೆ ಆವರಣದಲ್ಲಿ ಮಾಡಿಕೊಡಲಾಗಿತ್ತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಗೃಹ ಸಚಿವ ಅರಗ ಜ್ಞಾನೆಂದ್ರ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ‌ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರಾದ  ಲಾಲಾಜಿ ಆರ್. ಮೆಂಡನ್, ಹರೀಶ್ ಪೂಂಜಾ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉಡುಪಿ‌ ಜಿಲ್ಲಾಧಿಕಾರಿ ಕೂರ್ಮಾರಾವ್, ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಸಹಿತ ಅನೇಕ ಗಣ್ಯರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದ್ದರು.

ಎರಡು ಬಾರಿ ಬೈಂದೂರಿನಿಂದ ಶಾಸಕರಾಗಿದ್ದ ಎ.ಜಿ.ಕೊಡ್ಗಿಯವರು ಕಳೆದ ಕೆಲ ವರ್ಷಗಳಿಂದ ರಾಜಕೀಯ ನಿವೃತ್ತಿ ಪಡೆದು ಬಳಿಕ ಸಮಾಜಸೇವೆಯಲ್ಲಿ ಪೂರ್ಣಪ್ರಮಾಣವಾಗಿ ತೊಡಗಿಸಿಕೊಂಡಿದ್ದರು. ಇಳಿವಯಸ್ಸಿನಲ್ಲಿಯೂ ಉತ್ಸಾಹಿ ಜೀವನ ಸಾಗಿಸುತ್ತಿದ್ದ ಕೊಡ್ಗಿಯವರು ಇತ್ತೀಚೆಗೆ ಡೆಂಗ್ಯೂ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ‌ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ಸೋಮವಾರ ನಿಧನರಾಗಿದ್ದರು.

Comments are closed.