ಕರಾವಳಿ

ಕುಂದಾಪುರದ ಸಾಂತಾವರದಲ್ಲಿ ಗಾಳಿ-ಮಳೆಗೆ ಮರ ಬಿದ್ದು ಮನೆಗಳೆರಡು‌ ಹಾನಿ, ಅಪಾರ ನಷ್ಟ; ತಪ್ಪಿದ ಬಾರೀ ಅನಾಹುತ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಸೋಮವಾರ ರಾತ್ರಿ ವೇಳೆ ಬೀಸಿದ ಬಾರಿ‌ ಗಾಳಿಗೆ ಬೃಹತ್ ಗಾತ್ರದ ಮಾವಿನ ಮರವೊಂದು ಮನೆಗಳೆರಡರ ಮೇಲೆ ಬಿದ್ದ ಪರಿಣಾಮ ಮನೆಗಳು ಸಂಪೂರ್ಣ ಹಾನಿಯಾದ ಘಟನೆ ಕುಂದಾಪುರ ತಾಲೂಕಿನ ಕಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಸಾಂತಾವರ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿಗಳಾದ ಶಾರದಾ ದೇವಾಡಿಗ ಹಾಗೂ ಅವರ ತಂಗಿ ಬಾಬಿ ದೇವಾಡಿಗ ಎನ್ನುವರ ಅಕ್ಕಪಕ್ಕದಲ್ಲಿನ ಮನೆ ಮೇಲೆ ಮರ ಬಿದ್ದು ಮನೆಗಳು ಜಖಂಗೊಂಡಿದೆ. ಮನೆ ಎದುರಿನ ಬೃಹತ್ ಗಾತ್ರದ ಮಾವಿನ ಮರ ಬಿದ್ದಿದ್ದು ಈ ಮರ ಬೀಳುವ ವೇಳೆ ತೆಂಗಿನ ಮರ ಹಾಗೂ ಮತ್ತೊಂದು ಮರ ಕೂಡ ಬಿದ್ದಿದೆ. ಎರಡೂ ಮನೆಗಳ ಮೇಲ್ಮಾಡಿನ ಹೆಂಚು, ಪಕ್ಕಾಸೆಗಳು ಕಳಚಿ ಬಿದ್ದಿದೆ. ಮನೆಯೊಳಗಿನ ಫ್ಯಾನ್, ಟಿವಿ, ಪೀಠೋಪಕರಣ ಸಹಿತ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದೆ. ಕೂಲಿ ಕೆಲಸ ನೆಚ್ಚಿಕೊಂಡಿದ್ದ ಬಡ ಕುಟುಂಬಗಳು ಈ ಅನಾಹುತದಿಂದ ಕಂಗೆಟ್ಟಿದ್ದಾರೆ.

9 ತಿಂಗಳ ಮಗು ಸಹಿತ ಅದೃಷ್ಟವಶಾತ್ ಪಾರಾದ ಮಕ್ಕಳು..!
ಘಟನೆ ವೇಳೆ ಒಂದು ಮನೆಯಲ್ಲಿ ಬಾಬಿ, ಗಂಡ ಕೃಷ್ಣ ಇಬ್ಬರು ಗಂಡು ಮಕ್ಕಳಾದ ವಿಶ್ವನಾಥ್, ಸತೀಶ್, ಸೊಸೆ ಹಾಗೂ ಮೊಮ್ಮಕ್ಕಳಾದ 9 ತಿಂಗಳ ಪುಟಾಣಿ ಕಂದಮ್ಮ, 6 ವರ್ಷದ ಗಂಡು ಮಗು ಇದ್ದರು. ಶಾರದಾ ಅವರ ಮಕ್ಕಳಾದ ಶೋಭಾ, ಸಂದೇಶ, ಉಮೇಶ್, ಸೊಸೆ ಹಾಗೂ ಉಮೇಶ್ ಅವರ 3 ವರ್ಷದ ಮಗ, 8 ವರ್ಷದ ಮಗಳು ಮನೆಯಲ್ಲಿದ್ದರು. ಪುಟಾಣಿಗಳು‌ ಮನೆಯೊಳಕ್ಕಿದ್ದಿದ್ದು ಹಿರಿಯರು ಮನೆ ಸಮೀಪದ ರೈಲು ಹಳಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮನೆಯಿಂದ ಹೊರಕ್ಕಿದ್ದರು. ಮನೆ ಮೇಲೆ ಮರ ಬೀಳುತ್ತಿದ್ದಂತೆ ಮಕ್ಕಳನ್ನು ಸಿನಿಮೀಯ ರೀತಿಯಲ್ಲಿ ಪಾರು ಮಾಡಿದ್ದಾರೆ.

ಕಂದಾವರ ಗ್ರಾ.ಪಂ‌ ಉಪಾಧ್ಯಕ್ಷೆ ಶೋಭಾ, ಸದಸ್ಯ ಸೀನ ಪೂಜಾರಿ, ಗ್ರಾಮ ಲೆಕ್ಕಿಗ ಧೀರಜ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Comments are closed.