ಕರಾವಳಿ

ಕೊಲ್ಲೂರಿನಲ್ಲಿ ನೂತನ ಪ್ರವಾಸಿ ಮಂದಿರ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ

Pinterest LinkedIn Tumblr

ಕುಂದಾಪುರ: ಕೊಲ್ಲೂರಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಲೋಕೋಪಯೋಗಿ ಇಲಾಖೆ ವತಿಯಿಂದ 1.50 ಕೋಟಿ ರೂ ವೆಚ್ಚದಲ್ಲಿ ಕೊಲ್ಲೂರಿನಲ್ಲಿ ನಿರ್ಮಿಸಲಾದ ನೂತನ ಪ್ರವಾಸಿ ಮಂದಿರವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಇಂದು (ಮೇ.16 ಸೋಮವಾರ) ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಕೊಲ್ಲೂರು ಶ್ರೀಮೂಕಾಂಬಿಕಾ ದೇವರ ದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ದೂರದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದಲ್ಲಿ ಸಾರ್ವಜನಿಕರಿಗೆ ಅದರಿಂದ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಮೀಣ ರಸ್ತೆಗಳ ನಿರ್ಮಾಣ, ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ, ಕಿಂಡಿ ಅಣೆಕಟ್ಟುಗಳ ನಿರ್ಮಾಣಗಳಂತಹ ಯೋಜನೆಗಳಿಂದ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಮೀನುಗಾರಿಕೆಯನ್ನು ಹೆಚ್ಚಿನ ಲಾಭದಾಯಕವನ್ನಾಗಿ ಮಾಡಲು , ಮೀನುಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮೀನಿನ ಗುಣಮಟ್ಟ ಕಾಪಾಡಲು ಅಗತ್ಯವಿರುವ ಶೀತಲೀಕರಣ ವ್ಯವಸ್ಥೆ ನಿರ್ಮಾಣಕ್ಕೆ ಹಾಗೂ ಶೀತಲೀಕೃತ ವಾಹನಗಳನ್ನು ಒದಗಿಸುವುದು ಸೇರಿದಂತೆ ಮತ್ತಿತರ ಪರಿಕರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಕೊಲ್ಲೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಪ್ರತಿವರ್ಷ ಅಧಿಕವಾಗುತ್ತಿದ್ದು, ಭಕ್ತಾಧಿಗಳಿಗೆ ಹೆಚ್ಚಿನ ಸಂಖ್ಯೆಯ ವಸತಿ ಸೌಲಭ್ಯದ ಅಗತ್ಯವಿದ್ದು, ಪ್ರಸ್ತುತ ನಿರ್ಮಿಸಿರುವ ಹೊಸ ಪ್ರವಾಸಿ ಮಂದಿರದ ಜೊತೆಗೆ, ಈಗಾಗಲೇ ಇರುವ ಹಳೆಯ ಪ್ರವಾಸಿ ಮಂದಿರವನ್ನು ತೆರವುಗೊಳಿಸಿ ಆ ಪ್ರದೇಶದಲ್ಲಿ ಸುಸಜ್ಜಿತ ಹೊಸ ಪ್ರವಾಸಿ ಮಂದಿರ ನಿರ್ಮಾಣ ಮಾಡಲು ಈಗಾಗಲೇ 9.80 ಕೋಟಿ ರೂ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಅರಂಭಗೊಳ್ಳಲಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಗುಣಮಟ್ಟದ ಕಾಮಗಾರಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಕಳಪೆ ಕಾಮಗಾರಿ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಮ ಕೃಷ್ಣ ಭಟ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರವಿಕುಮಾರ್, ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಬಿಜೆಪಿ‌ ಬೈಂದೂರು ಕ್ಷೇತ್ರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments are closed.