ಕರ್ನಾಟಕ

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

Pinterest LinkedIn Tumblr

ತುಮಕೂರು: ಶಾಲಾ ಮಕ್ಕಳಿಗೆ‌ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನಡೆದಾಡುವ ದೇವರೆಂದು ಖ್ಯಾತರಾದ ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ತುಮಕೂರಿನಲ್ಲಿಂದು ಡಾ. ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಶಿವಕುಮಾರ ಸ್ವಾಮೀಜಿಗಳು ಕಷ್ಟದಲ್ಲಿರುವವರಿಗೆ ಬದುಕು ಕಟ್ಟಿಕೊಡುತ್ತಿದ್ದರು. ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹಗಳಲ್ಲಿ ಒಂದಾಗಿರುವ ಅನ್ನ ದಾಸೋಹವನ್ನು ಕೂಡ ಮಾಡಿದ್ದಾರೆ. ಮಧ್ಯಾಹ್ಯದ ಬಿಸಿ ಊಟದ ಯೋಜನೆಗೆ ಶಿವಕುಮಾರ ಸ್ವಾಮೀಜಿ ಹೆಸರು ಇಡಲು ಸರ್ಕಾರ ಮುಂದಾಗುತ್ತದೆ. ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರ ಇದರ ಬಗ್ಗೆ ಆದೇಶ ಹೊರಡಿಸುತ್ತೇನೆ ಎಂದರು‌.

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಡೆದಾಡಿದ ನೆಲದಲ್ಲಿ ಸ್ಪೂರ್ತಿ, ಹೆಮ್ಮೆ ಇದೆ. ಸುಮಾರು 88 ವರ್ಷ ಈ ಮಠದ ಸೇವೆ ಮಾಡಿದ್ದು ದಾಖಲೆಯಾಗಿದೆ. ಇಡಿ ದೇಶದಲ್ಲೇ ಈ ಕೆಲಸ ಯಾರು ಮಾಡಿಲ್ಲ. ಆ ದಾಖಲೆ ನಮ್ಮ‌ ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ. ಶ್ರೀಗಳು ಹಚ್ಚಿದ ಒಲೆಯ ಕಿಚ್ಚು ನಿರಂತರವಾಗಿ ನಡೆಯುತ್ತಿವೆ. ಅವರು ನಮ್ಮ‌ ನಡುವೆ ಜೀವಂತ ಆಗಿದ್ದಾರೆ. ಅವರು ದೈಹಿಕವಾಗಿ ಇಲ್ಲದೆ ಇದ್ದರೂ ಅವರ ನಡೆ ಗೌರವ ನಮ್ಮ‌ ಜೊತೆ ಸದಾ ಇರುತ್ತದೆ. ಇಂದು ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಅಲ್ಲ, ಭಕ್ತನಾಗಿ ಭಾಗಿಯಾಗುತ್ತಿರುವುದು ನನ್ನ ಪಾಲಿನ ಪುಣ್ಯ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬದುಕನ್ನು ಕಟ್ಟಿಕೊಟ್ಟ ಪರಮಪೂಜ್ಯರು ಅವರು. ಎಲ್ಲಾ ಸಮುದಾಯದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಅದು ಸಾಮಾನ್ಯ ಮಾತಲ್ಲ. ಅದು ದೈವ ಶಕ್ತಿ. ಸ್ವಾಮೀಜಿಯವರು ಯಾವುದೇ ಜಾತಿ ಭೇದ ಮಾಡಿಲ್ಲ. ಸರ್ವೋದಯ ಅಂತ್ಯೋದಯ ಆಗಬೇಕು ಎಂದರು.

ಏಪ್ರಿಲ್ 1 ದಾಸೋಹ ದಿನ..
ಇನ್ನು ಶಿವಕುಮಾರ ಸ್ವಾಮಿಗಳ ಜನ್ಮದಿನವನ್ನು ರಾಜ್ಯದಲ್ಲಿ ದಾಸೋಹ ದಿನವನ್ನಾಗಿ ಆಚರಿಸಲಾಗುವುದು ಎಂದು ಸಹ ಮುಖ್ಯಮಂತ್ರಿಗಳು ಘೋಷಿಸಿದರು. ಇದಕ್ಕೂ ಮುನ್ನ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀಗಳ ಹೆಸರನ್ನಿಡಬೇಕೆಂದು ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ಬೇಡಿಕೆ ಮುಂದಿಟ್ಟರು.

Comments are closed.