ಕರಾವಳಿ

ಟಿಪ್ಪು ಹೆಸರಲ್ಲಿ ಕೊಲ್ಲೂರು ದೇವಳದಲ್ಲಿ ನಡೆಯುವ ಸಲಾಂ ಮಂಗಳಾರತಿಯ ಹೆಸರು ತೆಗೆಯಲು ದೇವಾಲಯಕ್ಕೆ ವಿಎಚ್‌ಪಿ ಆಗ್ರಹ

Pinterest LinkedIn Tumblr

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪುವಿನ ಹೆಸರಿನಲ್ಲಿ ಪ್ರತೀ ದಿನ ನಡೆಯುತ್ತಿರುವ ಸಲಾಂ ಮಹಾಮಂಗಳಾರತಿಯ ಹೆಸರನ್ನು ತೆಗೆಯಬೇಕೆಂದು, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕ್ಷೇತ್ರದ ಆಡಳಿತ ಮಂಡಳಿಗೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿದೆ.

ಸಲಾಂ ಎಂಬ ಹೆಸರಿನಲ್ಲಿ ಪ್ರತಿ ನಿತ್ಯ ದೇವಿಗೆ ಮಹಾಮಂಗಳಾರತಿಯಾಗುವುದು ಗುಲಾಮಗಿರಿಯ ಸಂಕೇತವಾಗಿದೆ. ಇದರಿಂದ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ತಕ್ಷಣ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸಲಾಂ ಹಸರನ್ನು ತೆಗೆದು ಕೇವಲ ದೇವರ ಹೆಸರಲ್ಲಿ ಮಹಾಮಂಗಳಾರತಿ ಮಾಡಲು ಕ್ರಮತೆಗೆದುಕೊಳ್ಳಬೇಕೆಂದು ಶ್ರೀಕ್ಷೇತ್ರದ ಕೋಟ್ಯಂತರ ಭಕ್ತರ ಪರವಾಗಿ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ನೇತೃತ್ವದಲ್ಲಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬೈಂದೂರು ಪ್ರಖಂಡ ಅಧ್ಯಕ್ಷ ಜಗದೀಶ್ ಕೊಲ್ಲೂರು ಮನವಿ ಸಲ್ಲಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಐತಿಹಾಸಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರ ಭಾರತದ 108 ಶಕ್ತಿ ಪೀಠಗಳಲ್ಲಿ ಒಂದು. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಆದಿ ಶಂಕರಾಚಾರ್ಯರು ಮೂಕಾಂಬಿಕಾ ತಾಯಿಯನ್ನು ಇಲ್ಲಿ ನೆಲೆಗೊಳಿಸಿದ್ದಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಒಬ್ಬ ಕ್ರೂರಿ, ಮತಾಂಧ, ಹಿಂದೂ ವಿರೋಧಿ, ಕನ್ನಡ ವಿರೋಧಿ ಸಾವಿರಾರು ಹಿಂದುಗಳನ್ನು ನರಮೇಧ ಮಾಡಿ, ನೂರಾರು ದೇವಸ್ಥಾನಗಳನ್ನು ದ್ವಂಸಗೊಳಿಸಿದಂತಹ ಟಿಪ್ಪುವಿನ ಹೆಸರಿನಲ್ಲಿ ಪ್ರತೀ ದಿನ ರಾತ್ರಿ 8 ಗಂಟೆಗೆ ದೇವಿ ಮೂಕಾಂಬಿಕೆಗೆ ಸಲಾಂ ಎಂಬ ಹೆಸರಿನಲ್ಲಿ ಮಹಾಮಂಗಳಾರತಿಯಾಗುವುದು ಕ್ಷೇತ್ರದ ಪಾವಿತ್ರತೆಗೆ ಧಕ್ಕೆ ತರುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Comments are closed.