ಕರಾವಳಿ

ಹಿಜಾಬ್ ತೀರ್ಪು ಹಿನ್ನೆಲೆ ಮುಸ್ಲೀಂ‌ ಸಂಘಟನೆ ಕರೆಕೊಟ್ಟ ಬಂದ್’ಗೆ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ರೆಸ್ಫಾನ್ಸ್…!

Pinterest LinkedIn Tumblr

ಮಂಗಳೂರು/ಉಡುಪಿ: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‌ ಕರೆಗೆ ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಮಂಗಳೂರಿನ ಬಂದರ್‌, ಸೆಂಟ್ರಲ್‌ ಮಾರ್ಕೆಟ್‌, ಸ್ಟೇಟ್‌ ಬ್ಯಾಂಕ್‌, ಎಪಿಎಂಸಿ ಮಾರುಕಟ್ಟೆ ಮತ್ತಿತರ ವ್ಯಾಪಾರ ಪ್ರದೇಶಗಳ ಮೀನುಗಾರಿಕಾ ಬಂದರುಗಳು ಜನರಿಲ್ಲದೆ ಬಿಕೋ ಎನ್ನುತ್ತಿರುವುದು ಕಂಡು ಬಂದಿದೆ.

ಮಂಗಳೂರಿನಲ್ಲಿ ಮೀನು ಮತ್ತು ತರಕಾರಿ ವ್ಯಾಪಾರದಲ್ಲಿ ತೊಡಗಿರುವವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದು, ಬಂದ್‌ಗೆ ಬೆಂಬಲ ನೀಡಲು ವ್ಯಾಪಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಮಂಗಳೂರು ಮತ್ತು ದಕ್ಷಿಣ ಕನ್ನಡದ ಇತರ ಭಾಗಗಳ ಮಾರುಕಟ್ಟೆಗಳಲ್ಲಿಯೂ ಚಿಕನ್, ಮಟನ್ ಸ್ಟಾಲ್‌ಗಳನ್ನು ಬಂದ್ ಮಾಡಿರುವುದು ಕಂಡುಬಂದಿದೆ.

ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಮಂಗಳೂರಿನ ಉಳ್ಳಾಲದಲ್ಲಿ, ಉಡುಪಿಯ ಗಂಗೊಳ್ಳಿ ಭಾಗದಲ್ಲಿ ಬಂದ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಕಾಸರಗೋಡಿನ ಸಗಟು ಮಾರುಕಟ್ಟೆ ಕೂಡ ಬಿಕೋ ಎನ್ನುತ್ತಿರುವುದು ಕಂಡು ಬಂದಿದೆ.

ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸುವಂತಿಲ್ಲ. ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೀರ್-ಇ-ಷರಿಯತ್”ನ ಮುಖ್ಯಸ್ಥ ಮೌಲಾನಾ ಸಗೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಲಾಗಿದ್ದು, ಗುರುವಾರ ಕರ್ನಾಟಕ ಬಂದ್ ತೀರ್ಮಾನಿಸಿದ್ದವು.

ಬಂದ್’ಗೆ ಎಸ್’ಡಿಪಿಐ, ಪಿಎಫ್ಐ, ದಲಿತ್ ಮತ್ತು ಮೈನಾರಿಟಿ ಸೇನೆ, ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಮುಸ್ಲಿಂ ಸಂಘಟನೆಗಳ ಒಕ್ಕೂಟ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Comments are closed.