ಶಿವಮೊಗ್ಗ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ನಿನ್ನೆ ನಡೆದ ಹತ್ಯೆ ಪ್ರಕರಣದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರನ್ನು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಬರ್ಬರ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ವ್ಯಾಪಕ ಹಿಂಸಾಚಾರ ಉಲ್ಬಣಗೊಂಡಿದೆ. ಶಿವಮೊಗ್ಗದಲ್ಲಿ ಕಾನೂನು-ಸುವ್ಯವಸ್ಥೆ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಶಿವಮೊಗ್ಗ ನಗರದಲ್ಲಿ ಹರ್ಷ ಮೃತದೇಹ ಮೆರವಣಿಗೆ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ ನಡೆಸಲಾಗಿದೆ. ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಶಿವಮೊಗ್ಗ ಬಿ.ಹೆಚ್. ರಸ್ತೆಯಲ್ಲಿ ಹಣ್ಣಿನ ಅಂಗಡಿ ಮೇಲೆ ಕಲ್ಲೆಸೆತ ನಡೆಸಲಾಗಿದೆ. ಶೋ ರೂಮ್, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದರು.
ಶಿವಮೊಗ್ಗ ಭದ್ರತೆಗೆ ಬೆಂಗಳೂರಿನ ಪೊಲೀಸರ ನಿಯೋಜನೆ ಮಾಡಲಾಗಿದೆ. 212 ಪೊಲೀಸರನ್ನ ರಾಜ್ಯ ಸರ್ಕಾರ ಭದ್ರತೆಗೆ ನಿಯೋಜಿಸಿದೆ. ನಾಲ್ವರು ಪಿಐ, 8 ಪಿಎಸ್ಐ, 200 ಹೆಚ್ಸಿ, ಪಿಸಿ ನಿಯೋಜನೆ ಮಾಡಲಾಗಿದೆ. ಎಡಿಜಿಪಿ ಎಸ್.ಮುರುಗನ್ ಶಿವಮೊಗ್ಗದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಶ್ರಮಿಸುತ್ತಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಹಂತದಲ್ಲಿರುವುದರಿಂದ ಮಾಹಿತಿ ನೀಡಲಾಗಲ್ಲ. ಬೆಳಗ್ಗೆ ಹರ್ಷನ ತಂದೆ, ತಾಯಿಯನ್ನು ಭೇಟಿಯಾಗಿದ್ದೆವು. ನನ್ನ ಮಗನನ್ನು ತಂದುಕೊಡಲಾಗಲ್ಲ, ಸೂಕ್ತ ಕ್ರಮಕೈಗೊಳ್ಳಿ. ಬೇರೆ ಮಕ್ಕಳಿಗೆ ಇಂತಹ ಸ್ಥಿತಿ ಬರಬಾರದು ಎಂದವರು ಮನವಿ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ಶಿವಮೊಗ್ಗದಲ್ಲಿ 1,200 ಪೊಲೀಸ್ ಸಿಬ್ಬಂದಿ ಇದ್ದು, ಬೆಂಗಳೂರಿನಿಂದಲೂ 200 ಸಿಬ್ಬಂದಿ ಕಳುಹಿಸಲಾಗಿದೆ. ಹರ್ಷ ಹತ್ಯೆಯಲ್ಲಿ ಐವರು ಭಾಗಿಯಾಗಿರುವ ಮಾಹಿತಿಯಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
Comments are closed.