ಕುಂದಾಪುರ: ಉಡುಪಿ ಜಿಲ್ಲೆಯ ಕೋಟತಟ್ಟು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣದ ಆರೋಪಿಗಳಾದ ಎಸ್ಸೈ, ಹೆಡ್‌ಕಾನ್‌ಸ್ಟೇಬಲ್ ಸೇರಿದಂತೆ ಏಳು ಮಂದಿ ಪೊಲೀಸರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ಗಣಪ ಎಂಬವರ ಮನೆಯಲ್ಲಿ ಡಿ.27 ರಂದು ರಾತ್ರಿ ಮೆಹಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಿನ ಕೋಟ ಎಸ್ಸೈ ಸಂತೋಷ್ ಬಿ.ಪಿ., ಹೆಡ್‌ಕಾನ್‌ಸ್ಟೇಬಲ್ ರಾಮಣ್ಣ, ಅಶೋಕ್ ಶೆಟ್ಟಿ, ಮಂಜುನಾಥ್ ಮತ್ತು ಇತರ ಪೊಲೀಸರು ನುಗ್ಗಿ ನೆರೆದ ಜನರ ಮೇಲೆ ವಿನಾಕಾರಣ ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ಎಸಗಿದ್ದರೆಂದು ಮಧುಮಗ ರಾಜೇಶ್ ದೂರು ನೀಡಿದ್ದರು. ಅದರಂತೆ ಕೋಟ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿಗಳಾದ ಎಸ್ಸೈ ಸೇರಿದಂತೆ ಏಳು ಮಂದಿ ಪೊಲೀಸರು, ಜ.3ಕ್ಕೆ ಕುಂದಾಪುರ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಜೋಷಿ ಎಲ್ಲರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.
Comments are closed.