ಕರ್ನಾಟಕ

ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅವಘಡ: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿ ಬಲಿ

Pinterest LinkedIn Tumblr

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳುವಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್‌ ಆಗಿ ಬಿದ್ದ ಪರಿಣಾಮ, ಹಿಂಬದಿ ಕುಳಿತಿದ್ದ ಖಾಸಗಿ ಶಾಲೆ ಶಿಕ್ಷಕಿ ಮೇಲೆ ಬೊಲೆರೋ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟೆಗಾರ ಪಾಳ್ಯದ ಶಿಕ್ಷಕಿ ಶರ್ಮಿಳಾ (38) ಮೃತಪಟ್ಟವರು. ಬೈಕ್‌ ಚಲಾಯಿಸುತ್ತಿದ್ದ ಪತಿ ಪ್ರಕಾಶ್‌ಗೆ ಅವರಿಗೂ ಗಾಯಗಳಾಗಿದೆ. ಈ ಸಂಬಂಧ ಬೊಲೆರೋ ವಾಹನ ಚಾಲಕ ಮಾದೇಶ್‌ (34)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರ್ಮಿಳಾ ಹಾಗೂ ಪ್ರಕಾಶ್‌ ದಂಪತಿ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ರಜೆ ಇದ್ದ ಹಿನ್ನೆಲೆಯಲ್ಲಿ ಮಾದನಾಯಕನ ಹಳ್ಳಿಯಲ್ಲಿದ್ದ ಶರ್ಮಿಳಾ ಸಹೋದರನ ಮನೆಗೆ ದಂಪತಿ ಬೈಕ್‌ನಲ್ಲಿ ಹೊರಟ್ಟಿದ್ದರು. ಅಂಜನಾ ನಗರ ತಂಗುದಾಣ ಬಳಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಪ್ರಕಾಶ್‌ ದ್ವಿಚಕ್ರ ವಾಹನ ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ಸ್ಕಿಡ್‌ ಆಗಿ ದ್ವಿಚಕ್ರ ವಾಹನ ಸಹಿತ ದಂಪತಿ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಹಿಂದಿನಿಂದ ವೇಗವಾಗಿ ಬಂದ ಬೊಲೆರೋ ವಾಹನದ ಎಡಭಾಗದ ಚಕ್ರ ಶರ್ಮಿಳಾ ಅವರ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟರು. ಪ್ರಕಾಶ್‌ಗೆ ಸಣ್ಣ ಪುಟ್ಟ ಗಾಯಗಳಾಗಿ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಗಡಿ ಮುಖ್ಯ ರಸ್ತೆಯ ಅಂಜನಾ ನಗರದಿಂದ ದೊಡ್ಡಗೊಲ್ಲರ ಹಟ್ಟಿವರೆಗೆ ಕಾವೇರಿ ನೀರಿನ ಪೈಪ್‌ಲೈನ್‌ ಅಳವಡಿಕೆಗಾಗಿ ಜಲಮಂಡಳಿ ರಸ್ತೆಯನ್ನು ಅಗೆದಿದೆ. ಕಾಮಗಾರಿ ಬಳಿಕ ಆ ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿರಲಿಲ್ಲ. ಹೀಗಾಗಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇಷ್ಟೆಲ್ಲಾ ಸಾವು ನೋವು ಸಂಭವಿಸುತ್ತಿದ್ದರೂ ಸರ್ಕಾರ ಹಾಗೂ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Comments are closed.