ಕರಾವಳಿ

ಶಿಥಿಲಾವಸ್ಥೆಯಲ್ಲಿದೆ 400 ವರ್ಷ ಹಿಂದಿನ ಕೊಲ್ಲೂರು ಬ್ರಹ್ಮರಥ; ನೂತನ ಬ್ರಹ್ಮರಥ ನಿರ್ಮಾಣಕ್ಕೆ ಮುಂದೆ ಬಂದ ದಾನಿ ಸುನೀಲ್ ಆರ್. ಶೆಟ್ಟಿ

Pinterest LinkedIn Tumblr

ಉಡುಪಿ: ಪ್ರಸಿದ್ಧ ಯಾತ್ರಾ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ.

400 ವರ್ಷಗಳ ಹಿಂದಿನ ಬ್ರಹ್ಮರಥವು ಶಿಥೀಲಾವಸ್ಥೆಗೆ ತಲುಪಿದ್ದು ಕೆಲವೊಂದು ದುರಸ್ತಿ ಕಾರ್ಯ ನಡೆಸಲಾಗಿತ್ತು. ಸನ್ನಿಧಿಗೆ ನೂತನ ಬ್ರಹ್ಮರಥ ಆಗಬೇಕೆಂಬ ದೇವಳದ ಆಡಳಿತ ಮಂಡಳಿಯು ಸಂಕಲ್ಪಕ್ಕೆ ಕ್ಷೇತ್ರದ ಶಾಸಕರು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ದಾನಿಗಳು ಮುಂದೆ ಬಂದಿದ್ದು, ನೂತನ ಬ್ರಹ್ಮರಥ ನಿರ್ಮಾಣ ಕಾರ್ಯಕ್ಕೆ ಸುಸಮಯ ಒದಗಿಬಂದಿದೆ.

ಬೈಂದೂರು ಶಾಸಕ ಬಿ.ಎಂ .ಸುಕುಮಾರ ಶೆಟ್ಟಿ ಕೋರಿಕೆಯಂತೆ ದೇವಳದ ಪುರಾತನ ಬ್ರಹ್ಮರಥದ ಆಯ, ವಾಸ್ತು, ಸುತ್ತಳತೆ, ಎತ್ತರ, ಸಂಪ್ರದಾಯ ಹಾಗೂ ವಾಸ್ತುಶಿಲ್ಪಕ್ಕೆ ಚ್ಯುತಿಯಾಗದಂತೆ ನಿರ್ಮಿಸಿ ದೇವಳಕ್ಕೆ ಸಮರ್ಪಿಸಲು ದಾನಿ ಸುನೀಲ್ ಆರ್. ಶೆಟ್ಟಿ ಬೆಂಗಳೂರು ಅವರು ಒಪ್ಪಿರುವುದರಿಂದ ನೂತನ ಬಹ್ಮರಥ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ ಎನ್ನಲಾಗಿದೆ.

ದೇವಳದ ಆಡಳಿತ ಮಂಡಳಿಯ ಕೋರಿಕೆಯಂತೆ ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಆಗಬೇಕೆಂಬ ಪ್ರಸ್ತಾವನೆಗೆ ಕ್ಷೇತ್ರದ ಪರಮ ಭಕ್ತರು ಆಗಿದ್ದ ದಿವಂಗತ ಆರ್.ಎನ್.ಶೆಟ್ಟಿ ಅವರ ಪುತ್ರ ಸುನಿಲ್ ಆರ್.ಶೆಟ್ಟಿ ಒಪ್ಪಿಕೊಂಡು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
-ಬಿ.ಎಂ.ಸುಕುಮಾರ ಶೆಟ್ಟಿ ಶಾಸಕರು,ಬೈಂದೂರು

ದೇವಳದ ಪುರಾತನ ಬ್ರಹ್ಮರಥದ ಮಾದರಿಯಲ್ಲೇ ನೂತನ ಬ್ರಹ್ಮರಥ ನಿರ್ಮಾಣದ ಬೇಡಿಕೆಯನ್ನು ವ್ಯವಸ್ಥಾಪನಾ ಮಂಡಳಿ ಶಾಸಕರ ಮುಂದೆ ಇರಿಸಿದ್ದು, ಶಾಸಕರು ಬೆಂಗಳೂರಿನ ಉದ್ಯಮಿ ಸುನಿಲ್ ಆರ್.ಶೆಟ್ಟಿ ಅವರನ್ನು ಕೋರಿಕೊಂಡಾಗ ಅವರು ಸಂತೋಷದಿಂದ ಒಪ್ಪಿ ರಥ ನಿರ್ಮಾಣದ ಪೂರ್ಣ ವೆಚ್ಚ ಭರಿಸಲು ಮುಂದಾಗಿದ್ದಾರೆ. ಇಲಾಖೆಯ ಅನುಮತಿ ದೊರಕಿದ್ದು 9 ತಿಂಗಳ ಅವಧಿಯಲ್ಲಿ ರಥ ನಿರ್ಮಿಸಲು ಗಡುವು ನೀಡಲಾಗಿದೆ.
-ಎಸ್.ಪಿ.ಬಿ.ಮಹೇಶ್, ಕೊಲ್ಲೂರು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ

Comments are closed.