ಕರಾವಳಿ

ಮಂಗಳೂರು ಸುಲಿಗೆ ಪ್ರಕರಣ; ಕುಖ್ಯಾತ ಆರೋಪಿ ಆಕಾಶಭವನ ಶರಣ್ ಸಹಿತ ಐವರ ಬಂಧನ

Pinterest LinkedIn Tumblr

ಮಂಗಳೂರು: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿ 2 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆಕಾಶಭವನ ಶರಣ್ ಯಾನೆ ರೋಹಿದಾಸ್ ಹಾಗೂ ಆತನ ಇತರ 4 ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೋಹಿದಾಸ್ ಯಾನೆ ಶರಣ್ ಆಕಾಶಭವನ (38), ಅನಿಲ್ ಕುಮಾರ್ ಸಾಲ್ಯಾನ್ ಯಾನೆ ಅನಿಲ್ ಪಂಪ್ ವೆಲ್ (40), ಸೈನಾಲ್ ಡಿ ಸೋಜಾ (22), ಪ್ರಸಾದ್ (39), ಚೇತನ್ ಕೊಟ್ಟಾರಿ (35) ಎಂದು ಗುರುತಿಸಲಾಗಿದೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರೀಡ್ಜ್ ಬಳಿಯಲ್ಲಿ ಡಿಸೆಂಬರ್ 8ರಂದು ರಾತ್ರಿ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಮಯ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರಲಿದ್ದ ಮೊಬೈಲ್ ಫೋನ್, ನಗದು ರೂ. 3000 ಹಾಗೂ ದ್ವಿಚಕ್ರ ವಾಹನವನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪೈಕಿ ಆಕಾಶಭವನ ಶರಣ್ ಎಂಬಾತನು ಈ ಪ್ರಕರಣದ ಪ್ರಮುಖ ಸೂತ್ರದಾರಿಯಾಗಿದ್ದು, ಈತನು ಇತ್ತೀಚೆಗೆ ಜಾಮೀನು ಪಡೆದು ಬಿಡುಗಡೆಗೊಂಡಿದ್ದು, ಮತ್ತೆ ತನ್ನ ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಈ ಕೃತ್ಯಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಮಹೇಂದ್ರ ಎಕ್ಸ್ ಯುವಿ ಕಾರು, 3 ಮೊಬೈಲ್ ಫೋನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನು ಆಕಾಶಭವನ ಶರಣ್ ತನ್ನ ಸಹಚರರ ಮೂಲಕ ವಿರೋಧಿ ತಂಡದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದಾಖಲಾದ ಸುಲಿಗೆ ಪ್ರಕರಣದಲ್ಲಿ ಸುಲಿಗೆ ಮಾಡಿದ ಮೊಬೈಲ್ ಫೋನ್ ನಿಂದ ಆಕಾಶಭವನ ಶರಣ್ ಬೆದರಿಕೆ ಹಾಕಿರುವ ಬಗ್ಗೆ ಕೂಡ ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ.

Comments are closed.