ಕರ್ನಾಟಕ

ಡಿ.ಕೆ ಸುರೇಶ್ ನನಗೆ ಹಿರಿಯ ಅಣ್ಣ ಇದ್ದಂತೆ, ನನ್ನನ್ನು ತಳ್ಳಿದ್ದಕ್ಕೆ ಬೇಜಾರಿಲ್ಲ: ಕಾಂಗ್ರೆಸ್‌ ಯುವ ನಾಯಕ ನಲಪಾಡ್

Pinterest LinkedIn Tumblr

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವೇಳೆ ಅಡ್ಡಬಂದ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರನ್ನು ಡಿ.ಕೆ ಸುರೇಶ್ ಪಕ್ಕಕ್ಕೆ ತಳ್ಳಿದ್ದು ಭಾರೀ ಸುದ್ದಿಯಾಗಿದೆ.

ಈ ಬಗ್ಗೆ ಸ್ವತಃ ಮೊಹಮ್ಮದ್ ನಲಪಾಡ್ ಫೇಸ್ ಬುಕ್ ಲೈವ್ ಮೂಲಕ ಬಂದು ಘಟನೆ ಬಗ್ಗೆ ವಿವರಿಸಿದ್ದಾರೆ.

ನೀರಿಗಾಗಿ ಬೆಂಗಳೂರು ಜನತೆಗೆ ಕುಡಿಯುವ ನೀರಿಗಾಗಿ ಹೋರಾಟದಲ್ಲಿ ನಾವೆಲ್ಲರೂ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿದ್ದೇವೆ. ಈ ಸಂದರ್ಭದಲ್ಲಿ ನೂರಾರು ಕೈ ಕಾರ್ಯಕರ್ತರು ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆಯವರ ಬಳಿಗೆ ಹೋಗಿ ಫೋಟೋ ತೆಗೆದುಕೊಳ್ಳಲು ನೋಡುವುದು ಸಹಜ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಾಯಕನಾಗಿ ನಮ್ಮ ನಾಯಕರನ್ನು ಕಾಪಾಡುವುದು ನನ್ನ ಕರ್ತವ್ಯ.

(ಪಾದಯಾತ್ರೆಯಲ್ಲಿ ಮೊಹಮ್ಮದ್ ನಲಪಾಡ್)

ಪಾದಯಾತ್ರೆ ಆರಂಭವಾದ ನಂತರ ನಡಿಗೆ ವೇಳೆ ನಾಯಕರ ಬಳಿ ಬಂದ ಕಾರ್ಯಕರ್ತರನ್ನು ತಳ್ಳಿಹಾಕಿದ, ಬಿಸಾಕಿದ ಎಂದು ನನ್ನ ಮೇಲೆ ಮಾಧ್ಯಮಗಳಲ್ಲಿ, ಅಲ್ಲಲ್ಲಿ ಆರೋಪಗಳು ಬರುತ್ತಿವೆ. ನಮ್ಮ ನಾಯಕರ ಮೈ ಮೇಲೆ ಬಿದ್ದರೆ, ತಳ್ಳಾಡಿದರೆ ಅವರಿಗೆ ನಡೆಯಲು ಆಗುವುದಿಲ್ಲ, ಸಮಸ್ಯೆಯಾಗುತ್ತದೆ, ಹೀಗಾಗಿ ದೂರ ಹೋಗಲು ಹೇಳುತ್ತೇವೆ ಅಷ್ಟೆ. ಹೀಗೆ ಪಾದಯಾತ್ರೆ ನಡಿಗೆ ವೇಳೆ ಇಂದು ತಳ್ಳಾಟ, ನೂಕಾಟ ನಡೆಯುವಾಗ ನನ್ನನ್ನು ನೋಡದೆ ಹಿಂದಿನಿಂದ ಕಾಲರ್ ಹಿಡಿದು ನನ್ನನ್ನು ಪಕ್ಕಕ್ಕೆ ತಳ್ಳಿ ನೋಡಿದರು. ಅವರು ನನ್ನನ್ನು ನೋಡದೆ ಮಾಡಿರೋದು, ಬೇಕೆಂದೇ ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ.

ಅವರು ನನಗೆ ಹಿರಿಯ ಅಣ್ಣ ಇದ್ದಂತೆ, ಒಬ್ಬ ಅಣ್ಣ ತಮ್ಮನನ್ನು ಆ ಕಡೆ ಹೋಗು ಎಂದು ಹೇಳುವುದು ತಪ್ಪೇ, ಡಿ ಕೆ ಸುರೇಶ್ ಅವರಾಗಿರಲಿ, ಡಿ.ಕೆ ಶಿವಕುಮಾರ್ ಆಗಿರಲಿ ಎಲ್ಲಾ ಕಾಂಗ್ರೆಸ್ ನ ನಾಯಕರು, ಯುವ ನಾಯಕರು, ಕಾರ್ಯಕರ್ತರು ಕುಟುಂಬದಂತೆ ಜೀವನ ಮಾಡುತ್ತಿದ್ದೇವೆ. ನನಗೆ ಅವರೆಲ್ಲರೂ ಕುಟುಂಬವಿದ್ದಂತೆ. ಆ ಸಮಯದಲ್ಲಿ ಬೇರೆ ಯಾರಾಗಿದ್ದರೂ ಅದನ್ನೇ ಮಾಡುತ್ತಿದ್ದರು. ಈ ವಿಡಿಯೊ ಪ್ರಸಾರವಾದ ಮೇಲೆ ಸಾವಿರಾರು ಮಂದಿ ನನಗೆ ಕರೆ ಮಾಡಿ ಕೇಳುತ್ತಿದ್ದಾರೆ, ಮಾಧ್ಯಮಗಳಲ್ಲಿ ಇದನ್ನು ದೊಡ್ಡ ವಿಷಯ ಮಾಡಿ ತೋರಿಸುತ್ತಿದ್ದಾರೆ. ನಾನು ಮತ್ತು ಡಿ.ಕೆ ಸುರೇಶ್ ಅವರು ಈಗ ತಾನೇ ಜೊತೆಯಲ್ಲಿ ಊಟ ಮಾಡಿಕೊಂಡು ಬಂದಿದ್ದೇವೆ. ಆದರೆ ನಿರಂತರ ಫೋನ್ ಕಾಲ್ ಗಳು ಬರುತ್ತಿರುವುದರಿಂದ ನಾನು ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ,

ಇಂದು ನಡೆದ ಘಟನೆ ತೀರಾ ಸಹಜವಾದದ್ದು. ನನಗೆ ಮುಖ್ಯವಾಗದ ವಿಷಯ ಬೇರೆಯವರಿಗೆ ಏಕೆ, ದೊಡ್ಡ ವಿಷಯ ಮಾಡುವ ಅಗತ್ಯವೇನಿದೆ, ನನಗೇ ಚಿಂತೆಯಿಲ್ಲ, ನಿಮಗೇಕೆ, ಪಾದಯಾತ್ರೆಯಲ್ಲಿ ಸುದ್ದಿ ಮಾಡುವ ಬೇರೆ ವಿಷಯಗಳಿಗೆ ಅದು ಬಿಟ್ಟು ನನ್ನನ್ನು ತಳ್ಳಿದ ವಿಷಯವನ್ನು ದೊಡ್ಡ ಮಾಡುವ ಅಗತ್ಯವೇನಿದೆ ಎಂದು ಕೇಳಿದರು.

ಡಿ ಕೆ ಸುರೇಶ್ ನನಗೆ ಅಣ್ಣ ಇದ್ದಂತೆ, ಅವರು ತಳ್ಳಿದ್ದು ನನಗೆ ಯಾವುದೇ ಬೇಜಾರ ಆಗಿಲ್ಲ, ನನಗೆ ಬೇಸರವಾಗದಿರುವ ವಿಚಾರ ತಮಗೇಕೆ ಅಷ್ಟು ಕಷ್ಟ ಕೊಡುತ್ತಿದೆ..? ಡಿ. ಕೆ ಸುರೇಶ್, ಡಿ.ಕೆ ಶಿವಕುಮಾರ್ ಅವರನ್ನು ನಾನು ರಾಜಕೀಯದಲ್ಲಿ ಗುರು, ಮಾರ್ಗದರ್ಶಕರಾಗಿ ನೋಡುತ್ತೇನೆ, ರಾಜಕೀಯದಲ್ಲಿ ನಾನು ಇಂದು ಈ ಸ್ಥಿತಿಯಲ್ಲಿರಲು ನನ್ನ ತಂದೆಯ ನಂತರ ಡಿ.ಕೆ ಬ್ರದರ್ಸ್ ಕಾರಣ. ನಾವೆಲ್ಲರೂ ಈಗ ನೀರಿಗೋಸ್ಕರ ನಡೆಸುತ್ತಿರುವ ಹೋರಾಟ, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.

Comments are closed.