ಉಡುಪಿ: ಸಗಣಿ ನೀರಿನ ಹೊಂಡಕ್ಕೆ ಮಗುವೊಂದು ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರದ ಮೊಳಹಳ್ಳಿ ಬಳಿ ನಡೆದಿದೆ. ಮೃತ ಮಗುವನ್ನು ಬಿಹಾರ ಮೂಲದ ದಂಪತಿಗಳಾದ ಲಾಲ್ ಬಿಹಾರಿ ಹಾಗೂ ರಾಮ್ ದೇಹನ್ ಸಿಂಗ್ ಇವರ ಪುತ್ರ ಎರಡೂವರೆ ವರ್ಷದ ಅನುರಾಜ್ ಎಂದು ಗುರುತಿಸಲಾಗಿದೆ.
(ಸಾಂದರ್ಭಿಕ ಚಿತ್ರ)
ಬಿಹಾರ ಮೂಲದ ದಂಪತಿಗಳು ಕುಂದಾಪುರದ ಮೊಳಹಳ್ಳಿಯ ಕೈಲ್ಕೇರಿಯ ನಿವಾಸಿಯೊಬ್ಬರ ಮನೆ ಬಳಿ ವಾಸವಾಗಿದ್ದು ಇವರಿಗೆ ಅನುಷ್ಕಾ (4) ಹಾಗೂ ಅನುರಾಜ್ (2.6) ಮಕ್ಕಳಿದ್ದರು. ಸ್ಥಳೀಯರೊಬ್ಬರ ಹಟ್ಟಿಯಲ್ಲಿ ಸುಮಾರು 30 ದನಗಳಿದ್ದು, ಮಗುವಿನ ತಾಯಿ ದನದ ಹಟ್ಟಿ ನಿತ್ಯ ಸ್ವಚ್ಚಗೊಳಿಸುತ್ತಿದ್ದರು. ಹಟ್ಟಿಯ ನೀರು ಅಲ್ಲೇ ಇದ್ದ ಹೊಂಡದಲ್ಲಿ ತುಂಬುತ್ತಿದ್ದು , ಘಟನೆ ನಡೆದ ದಿನದಂದು ವಿದ್ಯುತ್ ಇಲ್ಲದ ಕಾರಣ ಹೊಂಡದ ನೀರು ಖಾಲಿ ಮಾಡಿರಲಿಲ್ಲ. ಅದೇ ದಿನ ಸಂಜೆ 4:45ಕ್ಕೆ ಕೆಲಸ ಮುಗಿಸಿ ಮನೆಗೆ ತೆರಳಿದ ತಾಯಿ ಲಾಲ್ ಬಿಹಾರಿ ಮಕ್ಕಳ ಜೊತೆ ಸಂಜೆ ಚಹಾ ಸೇವಿಸಿದ್ದಾರೆ. ಆದರೆ 5 ಗಂಟೆ ವೇಳೆ ಮಗ ಅನುರಾಜ್ ಕಾಣಿಸದೆ ಹುಡುಕಾಡಿದಾಗ ಮಗುವಿನ ಪಾದರಕ್ಷೆಗಳು ಹಟ್ಟಿಯ ನೀರು ಹೋಗುವ ಹೊಂಡದ ಬಳಿ ಬಿದ್ದಿದ್ದು ಸಂಶಯಗೊಂಡು ಸಗಣಿ ನೀರಿನ ಹೊಂಡಕ್ಕೆ ಇಳಿದು ಹುಡುಕಾಡಿದಾಗ ಮಗು ಮಾತನಾಡದೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೂಡ ಅಷ್ಟರಲ್ಲಾಗಲೇ ಮಗು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಗುವಿನ ತಾಯಿ ನೀಡಿದ ದೂರಿನ ಆಧಾರದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.