ಕರಾವಳಿ

‘ಕೊರಗರು, ದಲಿತ ಬಂಧುಗಳಿಗೆ ಭಯ ಬೇಡ, ಸರ್ಕಾರ ನಿಮ್ಮೊಂದಿಗಿದೆ’: ಗೃಹ ಸಚಿವರ ಭೇಟಿ ಬಳಿಕ ಸಚಿವ ಕೋಟ ಹೇಳಿಕೆ

Pinterest LinkedIn Tumblr

ಬೆಂಗಳೂರು: ಕೊರಗರು, ದಲಿತ ಬಂಧುಗಳು ಭಯ ಪಡುವ ಅವಶ್ಯಕತೆಯಿಲ್ಲ. ಸರ್ಕಾರ ನಿಮ್ಮ ಜೊತೆಯಿದೆ. ಏನಾದರೂ ಅಗತ್ಯವಿದ್ದರೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ‌ ಜಿಲ್ಲೆಯ ಕೋಟದಲ್ಲಿ‌ ರಾತ್ರಿ ನಡೆದ ಕೊರಗ ಸಮುದಾಯದವರ ಮೆಹಂದಿ ಕಾರ್ಯಕ್ರಮದಲ್ಲಿ ಪೋಲಿಸರು ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪಿಎಸ್‌ಐ ಸಸ್ಪೆಂಡ್ ಆಗಿದ್ದು, ಆರು ಜನರ ವರ್ಗಾವಣೆ ಕೂಡ ಮಾಡಲಾಗಿದೆ. ನಾನು ಖುದ್ದು ಸ್ಥಳಕ್ಕೆ ಭೇಟಿ ನೀಡಿದ್ದು ಎಸ್‌ಪಿ ಮತ್ತು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೆ. ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಒಬ್ಬ ಕಾನ್ಸ್‌ಟೇಬಲ್ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದು ಕೊರಗ ಕಾಲನಿ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಅಲ್ಲಿರುವ ಪರಿಸ್ಥಿತಿಯನ್ನು ಗೃಹಸಚಿವರಿಗೆ ವಿವರಿಸಲಾಗಿದೆ. ಎಂದರು.

ಇನ್ನು ಅಲ್ಲಿನ‌ ಕಾಲನಿ ಒಬ್ಬ ವ್ಯಕ್ತಿಗೂ ಕೂಡ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಸಚಿವರು ಆಶ್ವಾಸನೆ ನೀಡಿದ್ದಾರೆ. ಮತ್ತು ಎಸ್‌ಪಿ ಅವರಿಗೆ ಕರೆ ಮಾಡಿ ಪ್ರಕರಣದ ವಿಚಾರ ಕಾನೂನು ಪ್ರಕಾರ ದೂರು ದಾಖಲಿಸಲು ಸೂಚಿಸಿದ್ದಾರೆ. ನಿರ್ದೋಷಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾಗೂ ಕಾಲನಿಗೆ ತೆರಳಿ ಅವರಿಗೆ ಸಾಂತ್ವಾನ ಹೇಳಲು ಎಸ್ಪಿ ಅವರಿಗೆ ಗೃಹಸಚಿವರು ಸೂಚಿಸಿದ್ದಾರೆ” ಎಂದು ಹೇಳಿದ್ದಾರೆ.

Comments are closed.