ಕರಾವಳಿ

ಉಡುಪಿಯ ಕೋಟ ಕೊರಗರ ಕಥೆ ಇನ್ನೊಂದು ‘ಜೈ ಭೀಮ್’ ಸಿನಿಮಾದ ಪ್ರಕರಣವಾಗದಿರಲಿ: ಮಾಜಿ ಸಚಿವ ಎಚ್.ಸಿ ಮಹಾದೇವಪ್ಪ

Pinterest LinkedIn Tumblr

ಬೆಂಗಳೂರು: ಇತ್ತೀಚೆಗೆ ಉಡುಪಿ ಜಿಲ್ಲೆಯ ಕೋಟತಟ್ಟು ಎಂಬಲ್ಲಿ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಬಳಸಿದ್ದಕ್ಕೆ ಅಲ್ಲಿನ ಕೊರಗ ಸಮುದಾಯದ ಮೇಲೆ ಪೊಲೀಸರು ಪ್ರಹಾರ ನಡೆಸಿದ್ದರು. ಇಂತಹ ಹೀನ ಕೃತ್ಯ ಎಸಗಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದರು. ಆದರೆ ಅಚ್ಚರಿ ಎಂಬಂತೆ ಯಾವ ಕೊರಗರ ಮೇಲೆ ಹಲ್ಲೆ ನಡೆಸಲಾಗಿತ್ತೋ, ಇದೀಗ ಅವರ ಮೇಲೆಯೇ ಪೊಲೀಸರು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿದ್ದು, ಇದು ಮೇಲ್ನೋಟಕ್ಕೆ ಅತ್ಯಂತ ಸುಳ್ಳು ಪ್ರಕರಣವಾಗಿ ಕಾಣುತ್ತಿದೆ ಎಂದು‌ ಮಾಜಿ ಸಚಿವ ಎಚ್.ಸಿ ಮಹಾದೇವಪ್ಪ ಟ್ವೀಟ್ ಮೂಲಕ ಹೇಳಿದ್ದಾರೆ.

“ಪೊಲೀಸರು ಹಲ್ಲೆ ನಡೆಸಿದ ದಿನವೇ ತಮ್ಮ ಮೇಲಾದ ದಾಳಿಯ ಸುದ್ದಿಯ ಬಗ್ಗೆ ತಿಳಿಸದೇ ವಿಷಯವು ಸ್ವಲ್ಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೂಲ ವಿಷಯವನ್ನು ತಿರುಚುವಂತೆ ಬಹು ತಡವಾಗಿ ಪ್ರತಿಕ್ರಿಯೆ ನೀಡಿ ಕೇಸು ದಾಖಲಿಸಿರುವುದು. ಒಂದು ವೇಳೆ ಪೊಲೀಸರ ಮೇಲೆ ಕೊರಗರು ಹಲ್ಲೆ ನಡೆಸಿದ್ದೇ ನಿಜವಾದರೆ, ಈ ಸಂಗತಿಯನ್ನು ಪೊಲೀಸರು ಅಂದೇ ಏಕೆ ತಿಳಿಸಲಿಲ್ಲ? ಮತ್ತು ಯಾವ ಕಾರಣಕ್ಕೆ ಸಚಿವರ ಹೇಳಿಕೆಗಳು ಪ್ರಕಟಗೊಂಡ ಮೇಲೆ ಈ ರೀತಿ ಹೇಳಿಕೆ ನೀಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂಬುದರ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲ. ಮತ್ತು ಮೇಲಾಗಿ ಕೊರಗರು ಮೃದು ಸ್ವಭಾವದವರೂ ಆಗಿರುವುದು ಇಲ್ಲಿನ ಅನುಮಾನಗಳಿಗೆ ಮೂಲ ಕಾರಣ”.

“ಹೀಗಾಗಿಯೇ ಇದೊಂದು ಸುಳ್ಳು ಪ್ರಕರಣ ಎಂದೇ ನನಗೆ ಅನಿಸುತ್ತಿದ್ದು, ಸ್ಥಳೀಯ ಕಾಂಗ್ರೆಸ್ ನಾಯಕರು ಕೊರಗರ ಪರವಾಗಿ ನಿಲ್ಲಲು ಕೋರುತ್ತೇನೆ. ಇನ್ನು ಹಲ್ಲೆ ಯಾರ ಮೇಲೆ ನಡೆದಿದ್ದರೂ ಅದು ತಪ್ಪೇ. ಆದರೆ ಇದನ್ನೇ ಸುಳ್ಳು ಬಂಡವಾಳವಾಗಿಟ್ಟುಕೊಂಡು ಪ್ರಕರಣ ದಾಖಲಿಸುವ ಅದರಲ್ಲೂ ಜಾಮೀನು ರಹಿತ ಪ್ರಕರಣ ದಾಖಲಿಸುವುದು ನಿಜಕ್ಕೂ ಅನ್ಯಾಯದ ಪರಮಾವಧಿ ಮತ್ತು ಕೆಳ ಸಮುದಾಯದ ಮೇಲೆ ನಡೆದ ದೌರ್ಜನ್ಯವೇ ಆಗಿರುತ್ತದೆ.ಇನ್ನು ಈ ಕೋಮುವಾದಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನ ಸಮುದಾಯಗಳಿಗೆ ಅಷ್ಟಾಗಿ ರಕ್ಷಣೆ ಇಲ್ಲದಿರುವಾಗ ಇಂತಹ ಘಟನೆಗಳು ನಡೆದಿಲ್ಲ ಎಂದುಕೊಳ್ಳಲು ಆಗದು”.

“ಹೀಗಾಗಿಯೇ ಕಾಂಗ್ರೆಸ್ ಪಕ್ಷವು ಇದೀಗ ನೊಂದ ಸಮುದಾಯದ ಪರವಾಗಿ ನಿಲ್ಲಲಿದ್ದು, ನಕಲಿ ಪ್ರಕರಣ ದಾಖಲಿಸಲು ಹೊರಟಿರುವ ಪೊಲೀಸರು ಮತ್ತು ಸವರ್ಣೀಯರ ಹಿತಾಸಕ್ತಿಯನ್ನು ಕಾಪಾಡಲು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ಅವರ ಮೇಲಿನ ಪ್ರಕರಣವನ್ನು ಹಿಂಪಡೆಯಬೇಕು.ಇಲ್ಲದಿದ್ದರೆ ಎಲ್ಲಾ ದಲಿತ ಸಂಘರ್ಷ ಸಮಿತಿಗಳ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ನಡೆಸಲಾಗುವುದು. ಕೊರಗರ ಕಥೆ ಇನ್ನೊಂದು ಜೈ ಭೀಮ್ ಸಿನಿಮಾದ ಪ್ರಕರಣದಂತೆ ಆಗದಿರಲಿ ಅಷ್ಟೇ.

ಕೊರಗರ ಮೇಲೆ ಹಲ್ಲೆ ನಡೆಸಿದ ಪೊಲೀಸರು, ಹಲ್ಲೆ ನಡೆದ ದಿನವೇ ತಮ್ಮ ಮೇಲಾದ ದಾಳಿಯ ಸುದ್ದಿಯ ಬಗ್ಗೆ ತಿಳಿಸಿದೇ ವಿಷಯವು ಸ್ವಲ್ಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಮೂಲ ವಿಷಯವನ್ನು ತಿರುಚುವಂತೆ ಬಹು ತಡವಾಗಿ ಪ್ರತಿಕ್ರಿಯೆ ನೀಡಿ ಕೇಸು ದಾಖಲಿಸಿರುವುದು ಕೊರಗರ ಮೇಲಿನ ಸರ್ಕಾರಿ ಪ್ರಾಯೋಜಿತ ದಾಳಿಯಾಗಿದೆ ಎಂಬುದು ಅತ್ಯಂತ ಸ್ಪಷ್ಟವಾಗಿದೆ.

ಈ ಕುರಿತು ಸರಿಯಾದ ಸ್ಪಷ್ಟತೆ ಇಲ್ಲದೇ ಇರುವುದು ಇಲ್ಲಿನ ಅನುಮಾನಗಳಿಗೆ ಮೂಲ ಕಾರಣವಾಗಿದೆ. ಈ ಸುಳ್ಳು ಪ್ರಕರಣದಲ್ಲಿ ಎಲ್ಲರೂ ಕೊರಗರ ಪರವಾಗಿ ನಿಲ್ಲಲು ಕೋರುತ್ತೇನೆ. ಕೊರಗರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸುವ ಗೃಹ ಸಚಿವರ ಕ್ರಮವು ದಲಿತರ ಮೇಲಿನ ದೌರ್ಜನ್ಯವೇ ಆಗಿದೆ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.

Comments are closed.