ಬೆಂಗಳೂರು: ವಿಜಯನಗರದ ಸಂಚಾರ ಠಾಣೆ ವ್ಯಾಪ್ತಿಯ ಆರ್‌ಪಿಸಿ ಲೇಔಟ್‌ನ ಸವೀರ್ಸ್ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ ಎಂಬಾತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ನ್ಯೂ ಬಿನ್ನಿಪೇಟೆ ನಿವಾಸಿ ಶರವಣ ಎಂಬುವರ ಪುತ್ರ ಕೌಶಿಕ್ (19) ಮೃತಪಟ್ಟ ಯುವಕ. ಆರ್‌ಪಿಸಿ ಲೇಔಟ್‌ನ ಸವೀರ್ಸ್ ರಸ್ತೆಯಲ್ಲಿ ಡಿ.9ರಂದು ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ಮಾರ್ಗದಲ್ಲಿ ಚೇತನ್ ಬೈಕ್ ಚಲಾಯಿಸಿಕೊಂಡು ಬಂದಿದ್ದ. ಹಿಂಬದಿಯಲ್ಲಿ ಕೌಶಿಕ್ ಕುಳಿತಿದ್ದರು. ಪೊಲೀಸರನ್ನು ನೋಡಿ ಹೆದರಿದ್ದ ಚೇತನ್, ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ವಾಹನ ಚಲಾಯಿಸಿದ್ದಾನೆ. ರಸ್ತೆಯಲ್ಲಿ ನಿಂತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ರಾಧಾಕೃಷ್ಣ ಅವರಿಗೆ ಬೈಕ್ ಗುದ್ದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಉರುಳಿದೆ. ಹೆಲ್ಮೆಟ್ ಧರಿಸದ ಕಾರಣ ಕೌಶಿಕ್ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಚೇತನ್ ಬೈಕ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಗೊಂಡು ಪ್ರಜ್ಞಾಹೀನನಾಗಿದ್ದ ಕೌಶಿಕ್‌ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳಿಂದಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮೆದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ, ಚಿಕಿತ್ಸೆಗೆ ಸ್ಪಂದಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ತನ್ನ ಪುತ್ರನ ಸಾವಿಗೆ ವಿಜಯನಗರ ಸಂಚಾರ ಠಾಣೆಯ ಪೊಲೀಸರೇ ಕಾರಣ. ಇನ್ನಾದರೂ ಸಂಚಾರ ಪೊಲೀಸರು ವಾಹನಗಳನ್ನು ಹಿಮ್ಮೆಟ್ಟಿ ಹಿಡಿಯುವುದನ್ನು ನಿಲ್ಲಿಸಬೇಕು ಎಂದು ಕೌಶಿಕ್ ಪೋಷಕರು ನೊಂದು ಮಾತನಾಡಿದ್ದಾರೆ.
Comments are closed.