ಕರಾವಳಿ

ಶಬರಿಮಲೆ ಯಾತ್ರೆ; ಕೇರಳ ಸರಕಾರದಿಂದ ಭಕ್ತರಿಗೆ ಸಿಹಿಸುದ್ದಿ: ಕೋವಿಡ್‌ ನಿಬಂಧನೆಗಳಲ್ಲಿ ಕೆಲವು ಸಡಿಲಿಕೆ..!

Pinterest LinkedIn Tumblr

ಶಬರಿಮಲೆ: ಕೋವಿಡ್‌ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ಸನ್ನಿದಾನದ ಯಾತ್ರೆಗೆ ವಿಧಿಸಲಾಗಿದ್ದ ಕೋವಿಡ್‌ ನಿಬಂಧನೆಗಳಲ್ಲಿ ಕೆಲವು ವ್ಯವಸ್ಥೆಗಳನ್ನು ಸಡಿಲಿಕೆ ಮಾಡಲಾಗಿದ್ದು ಭಕ್ತರಿಗೆ ಅನುಕೂಲವಾಗಲಿದೆ.

ಕೇರಳದಲ್ಲಿ ಕೋವಿಡ್‌ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ಕೆಲವೊಂದು ನಿರ್ಬಂಧಗಳನ್ನು ಸಡಿಲಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್‌ ಅವರ ನೇತೃತ್ವದಲ್ಲಿ ನಡೆದ ಚರ್ಚೆಯ ಬಳಿಕ ಕೆಲವು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.

ನೀಲಿಮಲೆ ಮತ್ತು ಅಪಾಚೆ ಮೇಡುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಪಾದಿಂದ ನೀಲಿಮಲೆ, ಅಪಾಚೆ ಮೇಡು ಹಾಗು ಮರಕೂಟಂ ಮೂಲಕ ಶಬರಿಮಲೆಗೆ ಸಾಂಪ್ರದಾಯಿಕ ಮಾರ್ಗವನ್ನು ಭಕ್ತರ ಸಂಚಾರಕ್ಕಾಗಿ ತೆರೆಯಲು ನಿರ್ಧರಿಸಲಾಗಿದೆ.

ಪಂಪಾನದಿಯಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿಲ್ಲ. ಅಲ್ಲದೆ ಶಬರಿಮಲೆ ಸನ್ನಿಧಾನ, ಪಂಪಾ ಗಣಪತಿ ಸನ್ನಿಧಾನ ಸೇರಿದಂತೆ ಎಲ್ಲಿಯೂ ಭಕ್ತರಿಗೆ ತಂಗಲು ಅವಕಾಶವಿಲ್ಲ. ಸಂಜೆ 7ರಿಂದ ರಾತ್ರಿ 1ರ ತನಕ ನೀಲಕ್ಕಲ್‌ನಿಂದ ಪಂಪಾ ಕಡೆಗೆ ಸಂಚಾರವನ್ನು ಕೂಡ ನಿಷೇಧಿಸಿ ಆದೇಶ ಮಾಡಲಾಗಿದೆ.

ಭಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಿದ ಆನ್‌ಲೈನ್‌ ಟಿಕೆಟ್, ಕೋವಿಡ್‌ 2 ಡೋಸ್‌ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ್‌ ಕಡ್ಡಾಯವಾಗಿ ಹೊಂದಿರಬೇಕು. ನೀಲಕಲ್‌ ನಲ್ಲಿ ಅದೆಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭಕ್ತರಿಗೆ ಮುಂದಕ್ಕೆ ತೆರಳಲು ಅನುಮತಿ ನೀಡಲಾಗುತ್ತದೆ. ನೀಲಕಲ್‌ ಮಹಾದೇವ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 12.30ಯಿಂದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನ ಹಾಗೂ ತಿರುವಾಂಕೂರು ದೇವಸ್ವಂ ಬೋರ್ಡ್‌ ವತಿಯಿಂದ ಮಾಡಲಾಗಿದೆ. ಸನ್ನಿಧಾನದಲ್ಲೂ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಇರಲಿದೆ.

ತುಪ್ಪ ಅಭಿಷೇಕಕ್ಕೆ ಅವಕಾಶ ಇಲ್ಲ
ಅಯ್ಯಪ್ಪ ಸನ್ನಿಧಾನದಲ್ಲಿ ಭಕ್ತರಿಗೆ ನೇರವಾಗಿ ತುಪ್ಪಾಭಿಷೇಕ ಮಾಡಲು ಅವಕಾಶವಿಲ್ಲ. ದೇವಸ್ಥಾನದ ಕೌಂಟರ್‌ನಲ್ಲಿ ತುಪ್ಪ ನೀಡಿ ರಶೀದಿ ಪಡೆದುಕೊಂಡು ಸನ್ನಿಧಾನ ಪೊಲೀಸ್‌ ಠಾಣೆಯ ಬಳಿಯಿಂದ ರಶೀದಿ ಹಾಗೂ ತುಪ್ಪದ ಪಾತ್ರೆಯ ಗುರುತು ಹೇಳಿ ಅಭಿಷೇಕ ಮಾಡಿದ ತುಪ್ಪ ಪಡೆದುಕೊಳ್ಳಬಹುದಾಗಿದೆ. ಇನ್ನು ಭಕ್ತರಿಗೆ ಭಸ್ಮಕೊಳ,ಒರಿಕುಳಿ ತೀರ್ಥದಲ್ಲಿ ಸ್ನಾನ ಮಾಡಲು ನಿರ್ಬಂಧವಿದೆ.

 

Comments are closed.