ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಆರೋಪಿಯನ್ನು ನಗರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುಂಜತ್ತೂರಿನ ಗೌತಮ್ ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷದಿಂದ ಆರೋಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿತ್ತು. ನಂತರ ಈ ಪ್ರಕರಣವನ್ನು ನಗರದ ಮಹಿಳಾ ಠಾಣೆಗೆ ವರ್ಗಾಯಿಸಲಾಗಿತ್ತು.
17 ಹರೆಯದ ಬಾಲಕಿಯನ್ನು ಮದುವೆ ಮಾಡಿಕೊಡಬೇಕು ಎಂದು ಬಾಲಕಿಯ ಮನೆಯವರನ್ನು ಆರೋಪಿಯು ಒತ್ತಾಯ ಮಾಡುತ್ತಿದ್ದ. ಅಲ್ಲದೇ ನಿರಂತರವಾಗಿ ಫೋನ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಯುವತಿಯ ತಾಯಿ ಇದರಿಂದ ನೊಂದಿದ್ದು ಠಾಣೆಗೆ ದೂರು ನೀಡಿದ್ದರು.
ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿ ಗೌತಮನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Comments are closed.