ಕರಾವಳಿ

7 ದಿನದ ಕಂದನನ್ನು ಪೊದೆಯಲ್ಲಿ ಎಸೆದುಹೋದ ಮಹಿಳೆ ಹಾಗೂ ಇನ್ನೋರ್ವನನ್ನು ಬಂಧಿಸಿದ ಅಮಾಸೆಬೈಲು‌ ಪೊಲೀಸರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕಿನ ಅಮಾಸೆಬೈಲು ಮಚ್ಚಟ್ಟು ಸೇತುವೆ ಸಮೀಪ ಕಾಡಿನ‌ ಪೊದೆಯಲ್ಲಿ ಡಿ.1ರಂದು ಬುಧವಾರ ಸಂಜೆ ಸುಮಾರಿಗೆ ನವಜಾತ ಶಿಶು ಪತ್ತೆಯಾಗಿದ್ದು ರಕ್ಷಿಸಲಾಗಿತ್ತು. ಶಿಶುವನ್ನು ಎಸೆದು ಹೋದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಓರ್ವ ಮಹಿಳೆ ಸಹಿತ ವ್ಯಕ್ತಿಯೊಬ್ಬನನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ.

ರಾಧಾ (40), ಸತೀಶ್ (43) ಬಂಧಿತರು. ಇಬ್ಬರು ಕೂಡ ಕೊಲ್ಲೂರು ಸಮೀಪದ ಜಡ್ಕಲ್-ಮುದೂರಿನವರು ಎನ್ನಲಾಗಿದ್ದು ಎಸ್ಟೇಟ್’ವೊಂದರಲ್ಲಿ‌ ಕೂಲಿ‌ ಕಾರ್ಮಿಕರಾಗಿದ್ದರು. ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿದ್ದು ಸಾಂಸಾರಿಕ ಜೀವನ ಸರಿಯಿಲ್ಲದ ಕಾರಣ ಈಕೆ ಗಂಡನನ್ನು ಆತ ಮಡದಿಯನ್ನು ಬಿಟ್ಟಿದ್ದ. ಕಳೆದ ಒಂದು ವರ್ಷದಿಂದೀಚೆಗೆ ರಾಧಾ, ಸತೀಶ್ ಇಬ್ಬರು ಅನ್ಯೋನ್ಯವಾಗಿದ್ದರು.

ಘಟನೆ ಏನು..?
ಡಿ.1ರಂದು 4:30 ರ ಹೊತ್ತಿಗೆ ಮಚ್ಚಟ್ಟು ಗ್ರಾಮದ ಸೇತುವೆ ಬಳಿ ರಸ್ತೆಯ ಬದಿಯ ಕಾಡು ಪೊದೆಯಲ್ಲಿ ಮಗು ಅಳುವ ಧ್ವನಿ ಕೇಳಿ ಹಾಲು ಡೇರಿಗೆ ಹೋಗುತಿದ್ದ‌ ಸ್ಥಳೀಯ‌‌ ನಿವಾಸಿ ಗೀತಾ ಅವರು ಸ್ಥಳಕ್ಕೆ ತೆರಳಿ ನೋಡಿ ಮಗುವನ್ನು ಎತ್ತಿ ಪೊಲೀಸ್ ಠಾಣೆಗೆ ತಂದಿದ್ದು ಸುಮಾರು 7 ದಿನಗಳ ನವಜಾತ ಹೆಣ್ಣು ಮಗು ಅದಾಗಿತ್ತು. ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಮಗುವನ್ನು ಪೋಷಿಸಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ವಿಶೇಷ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಸ್ಥಿರವಾಗಿದೆ‌ ಎಂಬ ಮಾಹಿತಿ ಲಭಿಸಿದೆ. ಮಗು ಸಂಪೂರ್ಣ ಚೇತರಿಸಿಕೊಂಡ ಬಳಿಕ ಮಕ್ಕಳ ರಕ್ಷಣಾ ಘಟಕ, ಮಕ್ಕಳ‌ಕಲ್ಯಾಣ ಸಮಿತಿಯವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಮಗುವನ್ನು ಹಡೆದಿರುವ ಮಗುವಿನ ತಂದೆ -ತಾಯಿ ಮಗುವಿನ ಪಾಲನೆ ಪೋಷಣೆ ಮಾಡದೆ ಮಗುವನ್ನು ಅಪಾಯಕ್ಕೋಡ್ಡುವ ಉದ್ದೇಶದಿಂದ ರಸ್ತೆ ಬದಿಯ ಕಾಡು ಪೊದೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆಂದು‌ ಮಗುವನ್ನು ರಕ್ಷಿಸಿದ ಗೀತಾ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾರಿಹೋಕರಾಗಿದ್ದ ಗೀತಾ ಅವರು‌ ಮಗು ರಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿ‌ ಸಾಮಾಜಿಕ ಪ್ರಜ್ಞೆ ‌ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ಬಾರೀ‌ ಪ್ರಶಂಸೆಗೆ ಪಾತ್ರವಾಗಿತ್ತು.

ಕಲಂ: 317 ಜೊತೆಗೆ 34 ಐಪಿಸಿ ಕಲಂ ಅಡಿ ದೂರು ದಾಖಲಿಸಿಕೊಂಡ ಅಮಾಸೆಬೈಲು ಪೊಲೀಸರು‌ ತನಿಖೆಗೆ ಮುಂದಾಗಿದ್ದು ಪಿಎಸ್ಐ ಸುಬ್ಬಣ್ಣ ನೇತೃತ್ವದ ತಂಡಕ್ಕೆ ಒಂದಷ್ಟು ಪುರಾವೆಗಳು‌ ಸಿಕ್ಕಿದ್ದವು. ದ್ವಿಚಕ್ರ ವಾಹನದಲ್ಲಿ‌ಬಂದ ಪುರುಷ ಹಾಗೂ ಮಹಿಳೆ ಮಗು ಎಸೆದಿರಬಹಿದೆಂಬ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಮೂಲಕ ಸಾಗಿದ ತನಿಖೆ ಸಿಸಿ ಟಿವಿ ದೃಶ್ಯಾವಳಿ, ಕೆಲವು ತಾಂತ್ರಿಕ ಸಾಕ್ಷ್ಯಗಳ ಮೂಲಕ ಸಾಗಿದಾಗ ಇಬ್ಬರು ಲಾಕ್ ಆಗಿದ್ದರು. ಹಾಲಾಡಿ ಬಳಿಯ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆಯಾಗಿದ್ದು‌ ಮಗು ಬೇಡ ಎಂದು ತೀರ್ಮಾನಿಸಿದ ಇಬ್ಬರು ಮಗುವನ್ನು‌ ಎಸೆದು ಹೋಗುವ ಕಟುಕತನಕ್ಕೆ ಮುಂದಾಗಿದ್ದರು‌ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಘಟನೆ ನಡೆದ 2-3 ದಿನಗೊಳೊಳಗೆ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ‌ ಹಾಜರುಪಡಿಸುವ ಪ್ರಕ್ರಿಯೆಗಳು ನಡೆಸಲಾಗಿದೆ.

ಇದನ್ನೂ ಓದಿರಿ:

ಕಾಡು ಪೊದೆಯಲ್ಲಿ 7 ದಿನದ ಕಂದನನ್ನು ಎಸೆದುಹೋದ ಕಟುಕರು; ಹೆಣ್ಣು ಮಗುವನ್ನು ರಕ್ಷಿಸಿ ಮಾನವೀಯತೆ‌ ಮೆರೆದ ಮಹಿಳೆ

Comments are closed.