ಕರಾವಳಿ

ಸುತ್ತಿಗೆಯಿಂದ ಹೊಡೆದು ಫೋಟೋಗ್ರಾಫರ್ ಮರ್ಡರ್: ಕಾಡಿನಲ್ಲಿ ಶವ ಹೂತಿಟ್ಡಿದ್ದ ಕಿಲ್ಲರ್ಸ್..!

Pinterest LinkedIn Tumblr

ಪುತ್ತೂರು: ಕೃಷಿ ಜಮೀನು ನೋಡಲು ಬಂದ ಮೈಸೂರು ಮೂಲದ ಫೋಟೋಗ್ರಾಫರ್ ಒಬ್ಬರನ್ನು ಸಂಬಂಧಿಕರೇ ಕೊಲೆ ಮಾಡಿ ಕಾಡಿನ ಮಧ್ಯೆ ಹೂತು ಹಾಕಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಗುಳಿ ಎಂಬಲ್ಲಿ ನಡೆದಿದೆ.

ಮೈಸೂರಿನ ಸುಬ್ರಹ್ಮಣ್ಯ ನಗರದ ಜಗದೀಶ್(58) ಕೊಲೆಯಾದ ವ್ಯಕ್ತಿ. ಅವರು ನ. 17 ರಂದು ಪುತ್ತೂರಿನ ಕುಂಜೂರುಪಂಜ ಎಂಬಲ್ಲಿರುವ ತನ್ನ ಕೃಷಿಭೂಮಿಯನ್ನು ನೋಡಲು ಮೈಸೂರಿನಿಂದ ಪುತ್ತೂರಿಗೆ ಬಂದಿದ್ದರು.

ಈ ಕೃಷಿಭೂಮಿಯನ್ನು ಮುಗುಳಿ ನಿವಾಸಿ ಸುಬ್ಬಯ್ಯ ಅಲಿಯಾಸ್ ಬಾಲಕೃಷ್ಣ ರೈ ಎಂಬವರ ಜೊತೆ ಸೇರಿ ಸುಮಾರು ಎರಡೂವರೆ ಎಕರೆ ಜಾಗ ಖರೀದಿಸಿದ್ದರು. ಈ ಜಾಗದ ಖರೀದಿಯ ಬಳಿಕ ಜಾಗವನ್ನು ನೊಂದಣಿ ಮಾಡಲು ಜಗದೀಶ್ ಸಂಬಂಧಿ ಬಾಲಕೃಷ್ಣ ರೈ ಹಿಂದೇಟು ಹಾಕಿದ್ದರು. ಪುತ್ತೂರಿನ ಆರ್ಯಾಪು ಗ್ರಾಮದ ಕುಂಜೂರು ಪಂಜದಲ್ಲಿ ಜಮೀನನ್ನು ಖರೀದಿಸಿರುವ ಜಗದೀಶ್ ಆ ಜಾಗದಲ್ಲಿ ಮನೆ ನಿರ್ಮಿಸಿ ಪುತ್ತೂರಿನಲ್ಲೇ ಸೆಟಲ್ ಆಗಲು ತೀರ್ಮಾನಿಸಿದ್ದರು. ಈ ನಡುವೆ ಈ ಜಾಗವನ್ನು ಜಗದೀಶ್ ರೈ ಅವರ ಗಮನಕ್ಕೆ ತಾರದೆ ಬಾಲಕೃಷ್ಣ ರೈ ತಮ್ಮ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಲು ತೀರ್ಮಾನಿಸಿದ್ದರೆನ್ನಲಾಗಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಸಲು ಜಗದೀಶ್ ನವಂಬರ್ 17 ರಂದು ಮೈಸೂರಿನಿಂದ ಪುತ್ತೂರಿಗೆ ಬಂದಿದ್ದರು.

ಪುತ್ತೂರಿಗೆ ಬಂದ ಬಳಿಕ ಜಗದೀಶ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅನುಮಾನಗೊಂಡ ಜಗದೀಶ್ ಮನೆಯವರು ಮೈಸೂರಿನಲ್ಲಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಜಗದೀಶ್ ನಾಪತ್ತೆಯ ವಿಚಾರವಾಗಿ ಪೊಲೀಸರು ಬಾಲಕೃಷ್ಣ ರೈ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಆರೋಪಿ ಬಾಲಕೃಷ್ಣ ರೈ ಪೊಲೀಸರಿಗೆ ಜಗದೀಶ್ ನವಂಬರ್ 18 ರಂದೇ ಮೈಸೂರಿಗೆ ವಾಪಾಸು ಹೋಗಿದ್ದಾರೆ, ಹಾಗೂ ಅವರನ್ನು ಮಾರುತಿ ಓಮ್ನಿ ಕಾರಿನಲ್ಲೇ ತಾನೇ ಸುಳ್ಯಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದರು.

ಈ ಹಿನ್ನಲೆಯಲ್ಲಿ ಪೊಲೀಸರು ಜಗದೀಶ್ ಅವರ ಪತ್ತೆಗಾಗಿ ಶೋಧ ನಡೆಸಿದ್ದರು. ಹಿನ್ನಲೆಯಲ್ಲಿ ಆರೋಪಿ ಬಾಲಕೃಷ್ಣ ರೈಯನ್ನು ಸೂಕ್ತ ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿಯು ತನ್ನ ಮಗ ಹಾಗೂ ಇನ್ನೊಬ್ಬ ಯುವಕನ ಜೊತೆ ಸೇರಿಕೊಂಡು ಜಗದೀಶ್ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಪೋಲೀಸರು ಬಾಲಕೃಷ್ಣ ರೈ, ಆತನ ಮಗ ಪ್ರಶಾಂತ್ ರೈ ಹಾಗೂ ಜೀವನ್ ಗೌಡ ಎಂಬ ಮೂವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಶವ ರಕ್ಷಿತಾರಾಣ್ಯದಲ್ಲಿ ಹೂತು ಹಾಕಿದ್ದರು…
ಆರೋಪಿಗಳು ಸುತ್ತಿಗೆಯಿಂದ ಜಗದೀಶ್ ತಲೆಗೆ ಹೊಡೆದು ಕೊಲೆ ನಡೆಸಿದ್ದಾರೆನ್ನಲಾಗಿದೆ. ಬಳಿಕ ಆರೋಪಿಗಳು ಜಗದೀಶ್ ಶವವನ್ನು ಮುಗುಳಿ ರಕ್ಷಿತಾರಣ್ಯದಲ್ಲಿ ಮಣ್ಣಿನಲ್ಲಿ ಹೂತಿದ್ದು, ಯಾರಿಗೂ ಸಂಶಯ ಬಾರದ ರೀತಿಯಲ್ಲಿ ವರ್ತಿಸಿದ್ದರು. ಪೊಲೀಸರ ತನಿಖೆ ದಿಕ್ಕು ತಪ್ಪಿಸುವ ಸಲುವಾಗಿ ಜಗದೀಶ್ ಅವರ ಮೊಬೈಲ್ ಪೋನನ್ನು ನವಂಬರ್ 18 ರಂದೇ ಜಗದೀಶ್ ಮನೆಯ ಪಕ್ಕದಲ್ಲೇ ಎಸೆದು ಹೋಗಿದ್ದು, ಪೊಲೀಸರು ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಗದೀಶ್ ಮೊಬೈಲ್ ಮೈಸೂರಿನಲ್ಲೇ ಇರುವುದು ಬೆಳಕಿಗೆ ಬಂದಿದೆ. ಇದರಿಂದ ಆರೋಪಿಗಳ ಬಗ್ಗೆ ಪೊಲೀಸರಿಗೆ ಮೊದಲಿಗೆ ಯಾವುದೇ ಸಂದೇಹ ಬಂದಿರಲಿಲ್ಲ.

Comments are closed.