ಕರಾವಳಿ

ಮಂಗಳೂರು ಡಿಸಿಗೆ ಬೆದರಿಕೆ ಹಾಕಿದ ಆರೋಪ; ಹಿಂಜಾವೇ ಮುಖಂಡ ಜಗದೀಶ್ ಕಾರಂತ್‌ ವಿರುದ್ದ ಎಫ್.ಐ.ಆರ್

Pinterest LinkedIn Tumblr

ಮಂಗಳೂರು: ಪ್ರತಿಭಟನಾ ಸಭೆಯೊಂದರಲ್ಲಿ ದ.ಕ. ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯುತ್ತೇನೆ ಎಂದಿದ್ದ ಹಿಂದೂ ಜಾಗರಣ ವೇದಿಕೆ ಸಂಘಟನಾ ಕಾರ್ಯದರ್ಶಿ ಜಗದೀಶ್‌‌‌ ಕಾರಂತ್‌ ವಿರುದ್ದ ಪ್ರಕರಣ ದಾಖಲಾಗಿದೆ.

ನ.21ರ ಭಾನುವಾರದಂದು ಬಂಟ್ವಾಳದ ಕಾರಿಂಜದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಜಗದೀಶ್‌ ಕಾರಂತ್‌, ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ 21ಕ್ಕೆ ಎಲ್ಲರೂ ಸಿದ್ದರಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಜಿಲ್ಲಾಧಿಕಾರಿಗಳ ಕಛೇರಿಗೆ ಲಗ್ಗೆ ಹಾಕಿ, ಕೊರಳು ಪಟ್ಟಿಯನ್ನು ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಜಗದೀಶ್ ಕಾರಂತ್‌ ಅವರು ಏಕವಚನ ಹಾಗೂ ಅಸಭ್ಯವಾಗಿ ಮಾತುಗಳನ್ನಾಡುವ ಮೂಲಕ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ತೋರಿಸಿರುವುದಲ್ಲದೇ, ಸರಕಾರಿ ಅಧಿಕಾರಿಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಪ್ರಚೋದನೆ ಹಾಗೂ ಅಪರಾಧಕ್ಕೆ ದುಷ್ಪ್ರೇರಣೆ ನೀಡಿದ್ದಾರೆ. ಜಗದೀಶ್ ಕಾರಂತ್‌ ಅವರು ಅಪರಾಧಿಕ ಕೃತ್ಯವನ್ನು ಎಸಗುವ ಮನೋದೋರಣೆ ಹೊಂದಿ ಪ್ರಚೋದಾನಾಧಿಕಾರಿಯಾಗಿ ಬೆದರಿಕೆಯೊಡ್ಡಿರುವುದರಿಂದ ಮತ್ತು ಸಾವಿರಾರು ಜನಕ್ಕೆ ಅಪರಾಧಿಕ ಕೃತ್ಯವೆಸಗಲು ಪ್ರೇರಣೆ ನೀಡಿ ಅಪರಾಧಿಕಾ ಭೀತಿಯನ್ನುಂಟು ಮಾಡಿದ್ದಾರೆ ಹಾಗೂ ಅಪರಾಧ ಕೃತ್ಯ ನಡೆಸಲು ಪ್ರೇರಣೆಯನ್ನು ಮತ್ತು ಬೆದರಿಕೆಯನ್ನೊಡ್ಡಿದ್ದು, ಡಿಸೆಂಬರ್ 21 ಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಕಛೇರಿಗೆ ಲಗ್ಗೆ ಹಾಕಿ ಜಿಲ್ಲಾಧಿಕಾರಿಗಳ ಕೊರಳಪಟ್ಟಿ ಹಿಡಿಯಿರಿ ಎಂದು ಪ್ರಚೋದಿಸುವ ಮೂಲಕ ಸಾರ್ವಜನಿಕ ನೌಕರನಿಗೆ ಅಪರಾಧಿಕ ಭೀತಿಯನ್ನುಂಟು ಮಾಡಿರುವುದಲ್ಲದೇ, ಸರಕಾರಿ ಅಧಿಕಾರಿಗೆ ಹಾನಿ ಮತ್ತು ಹಲ್ಲೆ ಮಾಡಲು ಪ್ರಚೋದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.