ಕರಾವಳಿ

ಪುನೀತ್‌ ರಾಜಕುಮಾರ್‌ಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’: ಸಿಎಂ ಬೊಮ್ಮಾಯಿ ಘೋಷಣೆ

Pinterest LinkedIn Tumblr

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ರಾಜಕುಮಾರ್‌ ಹಾಗೂ ಪಾರ್ವತಮ್ಮ ರಾಜಕುಮಾರ್‌ ಅವರಂತೆಯೇ ಅವರ ಅಂತಿಮ ಸ್ಥಳದಲ್ಲಿ ಸಮಾಧಿ ನಿರ್ಮಾಣ ಮಾಡಲಾಗುವುದು. ಅಲ್ಲದೇ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ನಡೆಯುತ್ತಿರುವ ‘ಪುನೀತ್‌ ನಮನ’ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಪುನೀತ್‌ ರಾಜ್‌ ಕುಮಾರ್‌ ಕುರಿತು ಕರ್ನಾಟಕದ ಜನತೆಯಿಂದ ಸಾಕಷ್ಟು ಮನವಿಗಳು ಬರುತ್ತಿದೆ. ಅದ್ರಲ್ಲಿ ಪ್ರಮುಖವಾಗಿ ಮುತ್ತುರಾಜನ ಮಗ, ಯುವರತ್ನನಿಗೆ ಕರ್ನಾಟಕ ರತ್ನ ನೀಡಲು ನನಗೆ ಹೆಮ್ಮೆಯಿದೆ. ಸೂರ್ಯ ಚಂದ್ರ ಇರುವವರೆಗೆ ಪುನೀತ್‌ ರಾಜ್‌ ಕುಮಾರ್‌ ಚಿರಸ್ಥಾಯಿಯಾಗಿ ಇರುತ್ತಾರೆ. ರಾಜ್‌ ಕುಟುಂಬ ನಮ್ಮ ಹೃದಯದಲ್ಲಿ ಇರುತ್ತಾರೆ.

ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತೇವೆ ಅಂತಾ ಅಂದುಕೊಂಡಿರಲಿಲ್ಲ. ಯುವ ನಟ, ಬಹಳ ದೊಡ್ಡ ಬದುಕು ಅವನ ಮುಂದೆ ಇತ್ತು. ಸಾಧನೆಯ ಪರ್ವತವನ್ನು ಏರುವಂತೆ ಎಲ್ಲಾ ಚಲ ಮತ್ತು ಬಲ ಇದ್ದಂತಹ, ಆ ಯುವ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ನೊಂದರು.

ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮೀಯ, ಆತನನ್ನು ಬಾಲ್ಯದಿಂದಲೇ ನಾನು ಬಲ್ಲವನು. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆಯನ್ನು ಹೊಂದಿದ ವ್ಯಕ್ತಿ‌ ಅಪ್ಪು. ಕರ್ನಾಟಕದ ಇತಿಹಾಸದಲ್ಲಿ ಬಾಲ ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಪುನೀತ್‌ ರಾಜ್‌ ಕುಮಾರ್.‌ ನಾನು ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಆ ಸಣ್ಣ ವಯಸ್ಸಿನಲ್ಲಿಯೇ ಅಮೋಘ ಸಾಧನೆಯನ್ನು ಮಾಡಿದ್ದರು ಎಂದು‌ ಸಿಎಂ ಹೇಳಿದ್ದಾರೆ.

Comments are closed.