
ಮಂಗಳೂರು, ನವೆಂಬರ್. 15: ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಯಲ್ಲಿ ನಿರತರಾಗಿರುವ ಬಿರುವೆರ್ ಕುಡ್ಲ ಸಂಘಟನೆಯ ಹೆಸರನ್ನು ಕೆಡಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಬಿರುವೆರ್ ಕುಡ್ಲ ಸಂಘಟನೆಯ ಸಂಚಾಲಕ ಲಕ್ಷ್ಮೀಶ್ ಸುವರ್ಣ ಅರೋಪಿಸಿದ್ದಾರೆ.
ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್ ಅವರ ನೇತ್ರತ್ವದಲ್ಲಿ ನಗರದ ಖಾಸಗಿ ಹೊಟೇಲೊಂದರಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಳ್ಳಾಲ್ ಭಾಗ್ ಪರಿಸರದಲ್ಲಿ ನಡೆದಂತಹ ಗಲಾಭೆ ಪ್ರಕರಣಕ್ಕೆ ಸಂಬಂಧಪಟ್ಟ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ ಹಿಂದೂ ಸಂಘಟನೆಗಳ ಮುಖಂಡರಾಗಿರುವ ಶರಣ್ ಪಂಪ್ ವೆಲ್ ಅವರು ಬಿರುವೇರ್ ಕುಡ್ಲ ದ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.
ಈ ಹಿಂದೆ ಹಲವಾರು ಕಾರ್ಯಕ್ರಮಗಳಲ್ಲಿ ಬಿರುವೆರ್ ಕುಡ್ಲ ಸಮಾಜಮುಖಿ ಸಾಧನೆಯನ್ನು ಶ್ಲಾಘಿಸಿರುವ ಅವರು, ಇದೀಗ ಯಾರಾದೋ ಕುಮ್ಮಕ್ಕಿನಿಂದ ಬಿರುವೆರ್ ಕುಡ್ಲ ಸಂಘಟನೆಯ ಮೇಲೆ ಆರೋಪ ಮಾಡಿ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.

ಸಮಾಜಮುಖಿ ಕೆಲಸಕ್ಕಾಗಿ ಬಿರುವೆರ್ ಕುಡ್ಲ ಸಂಘಟನೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಘಟನೆಯಾಗಿದೆ. ಇಂತಹ ಬಿರುವೇರ್ ಕುಡ್ಲ ಸಂಘಟನೆಯ ಮೇಲೆ ಅವರಿಗೆ ಇಷ್ಟು ಅಭಿಮಾನ ಇರುವಾಗ ಅವರು ಪೂರ್ಣ ಮಾಹಿತಿಯನ್ನು ತಿಳಿಯದೆ ಸಂಘಟನೆಯ ಮೇಲೆ ಆರೋಪ ಮಾಡಿರುವುದು ಸರಿಯಲ್ಲ. ಅವರ ಕೌಟುಂಬಿಕ ಸಂಬಂಧಗಳ ಆಧಾರದಲ್ಲಿ ಮೆಚ್ಚಿಸಲು ಏಕಾಏಕಿ ಬಿರುವೆರ್ ಕುಡ್ಲ ದ ಮೇಲೆ ಆರೋಪ ಮಾಡಿದ್ದಾರೆ. ನಮಗೂ ಕೂಡ ನಮ್ಮ ಸಂಘಟನೆಯ ಘನತೆ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕೂಡ ಇದೆ. ಈ ಹಿನ್ನೆಲೆಯಲ್ಲಿ ಅವರು ಕೂಡಲೇ ಸಂಘಟನೆಯ ಕ್ಷಮೆಯಾಚಿಸಬೇಕು ಎಂದು ಲಕ್ಷ್ಮೀಶ್ ಸುವರ್ಣ ಆಗ್ರಹಿಸಿದರು.
ಬಿರುವೆರ್ ಕುಡ್ಲ ಸಂಘಟನೆಯ ಸದಸ್ಯ ದೀಪು ಶೆಟ್ಟಿಗಾರ್ ಮಾತನಾಡಿ, ಶರಣ್ ಪಂಪ್ವೆಲ್ ಸಿಟಿ ಸೆಂಟರ್ ಸಹಿತ ಹಲವು ಮುಸ್ಲಿಮರ ಕೇಂದ್ರಗಳಿಂದ ಗುತ್ತಿಗೆ ಹಿಡಿದು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹೋರಾಟ ಮಾಡುವ ಅವರಿಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಳ್ಳಾಲ್ಬಾಗ್ ಭಾಗ ಪ್ರದೇಶದಲ್ಲಿ ಇರುವವರು ಇಂತಹ ಯಾವುದೇ ಕೆಲಸವನ್ನು ಮಾಡಲಾರರು. ಗುರ್ಜಿ ದೀಪೋತ್ಸವ ಮಾಡುವ ಜವಾಬ್ದಾರಿಯನ್ನು ಹೊತ್ತ ಸಮಿತಿಯ ಪವಿತ್ರ ಜಾಗದಲ್ಲಿ ಕುಡಿದು ಕುಪ್ಪಳಿಸಿ ದಾರಿಯಲ್ಲಿ ಹೋಗುವವರಿಗೆ ಗುರಾಯಿಸಿ ನೋಡುವ, ತಮಾಷೆ ಮಾಡುವ ಮೂಲಕ ಪ್ರಚೋದನೆ ನೀಡಿ ಹೊರಗಿನಿಂದ ಬಂದ ಜನ ಪಾರ್ಟಿಯ ಹೆಸರಿನಲ್ಲಿ ಗಲಾಟೆಗೆ ಕಾರಣರಾಗುತ್ತಿದ್ದಾರೆ. ಶರಣ್ ಪಂಪ್ ವೆಲ್ ಅವರು ಮೊದಲಾಗಿ ಇದನ್ನು ತಡೆಯುವ ಕೆಲಸವನ್ನು ಮಾಡಬೇಕಿದೆ. ಶರಣ್ ಪಂಪ್ವೆಲ್ ಅವರು ಮೊದಲಾಗಿ ಬಳ್ಳಾಲ್ ಬಾಗ್ ಪ್ರದೇಶದಲ್ಲಿ ಯಾರುವ ಬಂದು ಗಲಾಟೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ತಿಳಿಸಿದರು.
ಇನ್ನೋರ್ವ ಸದಸ್ಯ ರಕ್ಷೀತ್ ಪೂಜಾರಿ ಮಾತನಾಡಿ, ಪೊಲೀಸ್ ಇಲಾಖೆ ಕೂಡ ಇತ್ತೀಚೆಗೆ ಹಲ್ಲೆ ಪ್ರಕರಣದ ತನಿಖೆ ಮಾಡುತ್ತಿದ್ದು ಎಲ್ಲಿಯೂ ಬೀರುವೆರ್ ಕುಡ್ಲದ ಹೆಸರು ಪ್ರಸ್ತಾಪವಾಗಿಲ್ಲ. ನಮ್ಮ ಉತ್ತಮ ಸಮಾಜ ಸೇವೆಯನ್ನು ಕಂಡು ಸಹಿಸಲಾರದ ಕೆಲವೊಂದು ವ್ಯಕ್ತಿಗಳು ನಮ್ಮ ಸಂಘಟನೆಗೆ ಮಸಿಬಳಿಯಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದಲ್ಲಿ ಬಿರುವೆರ್ ಕುಡ್ಲ ಸಂಘಟನೆಯ ಪಾತ್ರವಿಲ್ಲ. ಹಲ್ಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿ ನೀಡಿದರು.
ನಮ್ಮ ಸಂಘಟನೆ ಯಾವೂದೇ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲದೇ ಯಾರಿಗೂ ತೊಂದರೆ ನೀಡುವುದಿಲ್ಲ. ಆದರೆ ನಮ್ಮ ಸಂಘಟನೆಗೆ ಯಾರಾದರೂ ತೊಂದರೆ ಕೊಟ್ಟರೆ ಬಿರುವೆರ್ ಕುಡ್ಲ ಸಂಘಟನೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ರಕ್ಷೀತ್ ಪೂಜಾರಿ ಎಚ್ಚರಿಕೆ ನೀಡಿದರು.

ಒಂದೆರಡು ವ್ಯಕ್ತಿಗಳು ಬಂದು ನಮ್ಮ ಸಂಘಟನೆಯ ಮೇಲೆ ವಿನಾಕಾರಣ ಆರೋಪ ಮಾಡಿದರೆ ಜನತೆ ನಂಬುವುದಿಲ್ಲ. ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದು ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್ ತಿಳಿಸಿದರು.
ಬಿರುವೇರ್ ಕುಡ್ಲದ ವತಿಯಿಂದ ನಮ್ಮ ಸಮಾಜ ಸೇವೆ ಮುಂದುವರಿಯಲಿದೆ. ಬಡವರ್ಗಕ್ಕೆ ಅಶಕ್ತರಿಗೆ ಯಾವುದೇ ಜಾತಿಯನ್ನು ನೋಡದೆ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಲಿದ್ದೇವೆ. ಅಂದಾಜು 3 ಕೋಟಿಗೂ ಮಿಕ್ಕಿ ಆರ್ಥಿಕ ನಿಧಿಯನ್ನು ನಮ್ಮ ತಂಡದ ಸದಸ್ಯರು,ದಾನಿಗಳು ಸೇರಿ ಮನೆ ನಿರ್ಮಾಣ, ಆಸ್ಪತ್ರೆಯ ವೆಚ್ಚ ಭರಿಸಲು,ಶಿಕ್ಷಣ ಪಢಯಲು,ಅಂಗವಿಕಲರಿಗೆ ಉಪಕರಣ ಮತ್ತಿತರ ಹಲವು ಸೇವಾ ಚಟುವಟಿಕೆಗೆ ವಿನಿಯೋಗಿಸಿದ್ದೇವೆ ಎಂದು ಉದಯ ಪೂಜಾರಿ ಬಳ್ಳಾಲ್ ಭಾಗ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಅಮೀತ್ ಕೋಡಿಕಲ್. ರೋಷನ್, ರಾಕೇಶ್ ಚಿಲಿಂಬಿ, ಕಿಶೋರ್ ಬಾಬು, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ, ರಾಕೇಶ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
Comments are closed.