
ಮಂಗಳೂರು, ನವೆಂಬರ್ 04 : ತಂದೆ ಹಾಗು ಮಗ ಸೇರಿ ಒಂದೇ ಫ್ಲಾಟ್ ನಲ್ಲಿದ್ದ ವ್ಯಕ್ತಿಯೋರ್ವರನ್ನು ಇರಿದು ಕೊಲೆಗೈದಿರುವ ಘಟನೆ ಇಂದು ಮುಂಜಾನೆ ನಗರದ ಕಾರ್ ಸ್ಟ್ರೀಟ್ ಸಮೀಪ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಕಾರ್ಸ್ಟ್ರೀಟ್ ಮಹಾಮ್ಮಾಯಿ ರಸ್ತೆಯಲ್ಲಿರುವ ವೀರ ವೆಂಕಟೇಶ ಅಪಾರ್ಟ್ಮೆಂಟ್ ನಿವಾಸಿ ವಿನಾಯಕ ಕಾಮತ್(44) ಎಂದು ಗುರುತಿಸಲಾಗಿದೆ.
ಅದೇ ಫ್ಲಾಟ್ ನಲ್ಲಿ ವಾಸ್ತವ್ಯ ಹೊಂದಿರುವ ತಂದೆ ಕೃಷ್ಣಾನಂದ ಕಿಣಿ ಹಾಗೂ ಮಗ ಅವಿನಾಶ್ ಕಿಣಿ ಕೊಲೆ ಆರೋಪಿಗಳಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ಅಪಾರ್ಟ್ ಮೆಂಟ್ ನ ಮುಂಭಾಗ ಮಂಗಳೂರು ಮನಪಾ ಸಿಮೆಂಟ್ ಹಾಕಿ ಸರಿ ಮಾಡಿದ್ದು ಇದರ ಮೇಲೆ ಬೇರೆಯವರ ಕಾರು ಹೋಗುವ ವಿಚಾರದಲ್ಲಿ ನಮ್ಮ ನೆರೆಮನೆಯವರಾದ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರು ತನ್ನ ಗಂಡನೊಂದಿಗೆ ಜಗಳ ಮಾಡಿದ್ದರು.
ನ.03 ರ ರಾತ್ರಿ ಅಪಾರ್ಟ್ ಮೆಂಟ್ ನಲ್ಲಿ ಕೆಲವರು ದೀಪಾವಳಿ ಆಚರಿಸುತ್ತಿದ್ದ ಸಂದರ್ಭ ಗಂಡ ವಿನಾಯಕ್ ಅಪಾರ್ಟ್ಮೆಂಟ್ ಕೆಳಗೆ ಹೋಗಿದ್ದಾರೆ. ಈ ಸಂದರ್ಭ ಪಾರ್ಕಿಂಗ್ ಸ್ಥಳದಲ್ಲಿದ್ದ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರೊಂದಿಗೆ ಜಗಳವಾಡತೊಡಗಿದ್ದು, ಗಲಾಟೆ ಕೇಳಿ ನನ್ನ ಅತ್ತೆಯೂ ಕೆಳಕ್ಕೆ ಹೋದಾಗ ಅವರನ್ನು ತಳ್ಳಿ, ಕೃಷ್ಣಾನಂದ ಕಿಣಿ ತಮ್ಮ ಕೈಯಲ್ಲಿದ್ದ ಚೂರಿನಿಂದ ವಿನಾಯಕ ಕಾಮತ್ ಅವರ ಎದೆಗೆ ಚುಚ್ಚಿದ್ದಾರೆ , ಅವರ ಮಗ ಅವಿನಾಶ್ ಕಿಣಿ ಕೂಡ ದೂಷಿಸುತ್ತಾ ಕೊಲೆಗೆ ಸಹಕರಿಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಮೃತರ ಪತ್ನಿ ಅಮಣಿ ಕಾಮತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಿನಾಯಕ್ ಕಾಮತ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನ.04 ರ 1.45 ರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದರು ಠಾಣಾ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Comments are closed.