ಕರಾವಳಿ

ನಿರ್ಮಾಣ ಹಂತದಲ್ಲಿದ್ದ ಮನೆಯ ಸ್ಲಾಬ್ ಕುಸಿತ : ಓರ್ವ ಕಾರ್ಮಿಕ ಸಾವು- ಇನ್ನೊರ್ವನಿಗೆ ಗಂಭೀರ ಗಾಯ

Pinterest LinkedIn Tumblr

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಪಡುಕೆರೆ ಶಿರಸಿ ಮಾರಿಕಾಂಬ ದೇವಳದ ಹತ್ತಿರ ನಿರ್ಮಾಣ ಹಂತದಲ್ಲಿರುವ‌ ಮನೆಯ ಎದುರಿನ‌ ಸ್ಲ್ಯಾಬ್ ಕುಸಿದು ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವನಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ‌ ಘಟನೆ ಬುಧವಾರ ನಡೆದಿದೆ.

ಗಾರೆ ಕೆಲಸ‌ ಮಾಡಿಕೊಂಡಿದ್ದ ಸಾಲಿಗ್ರಾಮ ಗೆಂಡೆಕೆರೆ ನಿವಾಸಿ ಮಂಜುನಾಥ್ (38) ಮೃತ ದುರ್ದೈವಿ. ಅಲ್ಲಿಯೇ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಚೇತನ್ ಪೂಜಾರಿ (28) ಗಾಯ ಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಬೆಳಿಗ್ಗೆ ಸ್ಲ್ಯಾಬ್ ನ ಸಪೋರ್ಟ್ ಗಳನ್ನು ತೆಗೆಯುತ್ತಿದ್ದಾಗ ಈ ಘಟನೆ‌ ನಡೆದಿದ್ದು, ಸ್ಥಳದಲ್ಲಿ ಗಾರೆಗೆಂದು ಸಿಮೆಂಟ್ ಕಲಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಸ್ಲ್ಯಾಬ್ ಕುಸಿದು ಮಂಜುನಾಥ್ ನ ಮೇಲೆ‌ ಬಿದ್ದು ಅಸುನೀಗಿದ್ದಾರೆ ಎಂದು‌ ಹೇಳಲಾಗಿದೆ. ಇಂಜಿನಿಯರ್ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕೋಟ ಠಾಣಾಧಿಕಾರಿ ಸಂತೋಷ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.