ಕರ್ನಾಟಕ

‘ನೀನೆ ರಾಜಕುಮಾರ’- ನಾಲ್ವರ ಬಾಳಲ್ಲಿ ಬೆಳಕು ಮೂಡಿಸಿದ ಪುನೀತ್ ರಾಜಕುಮಾರ್ ನೇತ್ರಗಳು

Pinterest LinkedIn Tumblr

ಬೆಂಗಳೂರು: ಮೊನ್ನೆ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟ ಸ್ಯಾಂಡಲ್ ವುಡ್ ಯುವ ರತ್ನ ಪುನೀತ್​ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಲಾಗಿದೆ.

ಪುನೀತ್ ರಾಜಕುಮಾರ್ ಸಾವಿನ ನಂತರವೂ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ಅವರ ಎರಡು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಲಾಗಿದೆ. ಈ ಬಗ್ಗೆ ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಈ ಹಿಂದೆ ಡಾ. ರಾಜ್​ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದ್ದರು. ಅವರ ಹಾದಿಯಲ್ಲಿಯೇ ಪುನೀತ್​ ಕೂಡ ನೇತ್ರದಾನ ಮಾಡಿದ್ದಾರೆ. ದಾನ ಮಾಡಲಾದ 2 ಕಣ್ಣುಗಳು ಆರೋಗ್ಯವಾಗಿದ್ದರೆ ಕಾರ್ನಿಯಾವನ್ನು ನಾವು ನಾಲ್ಕು ಭಾಗ ಮಾಡಬಹುದು. ಕಾರ್ನಿಯಾವನ್ನು ಒಂದು ಗ್ಲಾಸ್​ ಎಂದು ಊಹಿಸಿದರೆ ಅದರಲ್ಲಿ ಮುಂಭಾಗ ಮತ್ತು ಹಿಂಭಾಗ ಇರುತ್ತದೆ. ಮುಂಭಾಗದ ಕಾರ್ನಿಯಾ ತೊಂದರೆ ಇರುವವರಿಗೆ ದಾನ ಪಡೆದ ಕಣ್ಣಿನ ಮುಂಭಾಗವನ್ನು ಅಳವಡಿಸುತ್ತೇವೆ. ಹಿಂಭಾಗದ ತೊಂದರೆ ಇರುವವರಿಗೆ ಹಿಂಭಾಗದ ಕಾರ್ನಿಯಾವನ್ನು ಅಳವಡಿಸಲಾಗುತ್ತದೆ ಎಂದು ಡಾ. ಭುಜಂಗ ಶೆಟ್ಟಿ ಹೇಳಿದ್ದಾರೆ.

ಈ‌ ಹಿಂದೆ ಪೂರ್ತಿ ಕಾರ್ನಿಯಾವನ್ನು ಬದಲಾಯಿಸುತ್ತಿದ್ದೆವು. ಆದರೆ ಈಗ ತಂತ್ರಜ್ಞಾನ ಮುಂದುವರಿದಿದೆ. ಕಣ್ಣುಗಳನ್ನು ಪದರದ ರೀತಿ ಭಾಗ ಮಾಡಲು ಸಾಧ್ಯ ಇರುವುದರಿಂದ ಎರಡು ಕಣ್ಣನ್ನು ನಾಲ್ಕು ಜನರಿಗೆ ಜೋಡಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಏಕಕಾಲಕ್ಕೆ ಒಬ್ಬರ ಕಣ್ಣನ್ನು ನಾಲ್ಕು ಮಂದಿಗೆ ಒಂದೇ ದಿನದಲ್ಲಿ ಜೋಡಿಸಿದ್ದು ಇದೇ ಮೊದಲು. ನಮ್ಮ ವೈದ್ಯರ ತಂಡದಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಕಣ್ಣುಗಳನ್ನು ದಾನ ಪಡೆದವರು ಯಾರು, ನೀಡಿದವರು ಯಾರು ಎಂಬುದನ್ನು ಬಹಿರಂಗಪಡಿಸುವಂತಿಲ್ಲ. ಹಾಗಾಗಿ ಪುನೀತ್‌ ಅವರ ಕಣ್ಣು ಪಡೆದವರು ಯಾರು ಎಂಬುದನ್ನು ಗೌಪ್ಯವಾಗಿಯೇ ಇಡಲಾಗಿದೆ. ಅಷ್ಟೇ ಅಲ್ಲ, ಕಣ್ಣು ಪಡೆದ ವ್ಯಕ್ತಿಗೂ ಕೂಡ ತಾವು ಪಡೆದಿರುವುದು ಪುನೀತ್​ ಅವರ ಕಣ್ಣು ಎಂದು ಹೇಳಲಾಗೋದಿಲ್ಲ.

Comments are closed.