ಕರ್ನಾಟಕ

ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು: ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಭಿಮತ

Pinterest LinkedIn Tumblr

ಬೆಂಗಳೂರು: ಕನ್ನಡ ಭಾಷೆಗೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ. ಎಲ್ಲಾ ರಂಗಗಳಲ್ಲಿಯೂ ಕನ್ನಡಕ್ಕೆ ಸ್ಥಾನ ನೀಡಬೇಕು. ಕನ್ನಡವನ್ನು ಎಲ್ಲ ಆಯಾಮಗಳಲ್ಲೂ ಬಳಕೆಗೆ ತರುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕಿದೆ. ಅದಕ್ಕೆ ಪೂರಕವಾಗಿ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಬೋಧಿಸುವ ಕೆಲಸವನ್ನು ತಮ್ಮ ಸರ್ಕಾರ ಆರಂಭಿಸಿದೆ. ಈ ವಿಚಾರದಲ್ಲಿ ಗಟ್ಟಿಯಾದ ನಿಲುವನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ.

ಸಾರ್ವಜನಿಕ ಇಲಾಖೆಯು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಕನ್ನಡ ನಮ್ಮ ದೇವರು. ಕನ್ನಡವೆಂಬ ತಾಯಿ ದೇವರನ್ನು ಸಂರಕ್ಷಿಸಬೇಕು. ಕನ್ನಡವನ್ನು ಬೃಹತ್ ಹೆಮ್ಮರವಾಗಿ ಬೆಳಸಬೇಕು. ಭಾಷೆ ಸದೃಢವಾಗಿದ್ದರೆ ಆ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಭಾರತದಲ್ಲಿ ಅತ್ಯಂತ ಪುರಾತನವಾದ ಭಾಷೆ ಕನ್ನಡ. ಕನ್ನಡ ಸಿಂಧೂ ನಾಗರಿಕತೆಗೂ ಮೊದಲು ಬಳಕೆಯಲ್ಲಿದ್ದ ಭಾಷೆ. ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿರುವ ಕನ್ನಡದ ಶಕ್ತಿ ಕಸಿಯಲು ಸೂರ್ಯ, ಚಂದ್ರರು ಇರುವವರೆಗೂ ಅಸಾಧ್ಯ ಎಂದು ಹೇಳಿದರು.

ಎಲ್ಲಿ ಭಾಷೆ ಸದೃಢವಾಗಿರುತ್ತದೆಯೋ ಅಲ್ಲಿ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಭಾಷೆ ತಿಳಿಯದವರಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡ ಅಭಿವೃದ್ಧಿಯಾಗುತ್ತದೆ. ಕನ್ನಡವನ್ನು ರಾಜ್ಯದ ಗಡಿಯೊಳಗೆ ಸೀಮಿತವಾಗಿ ನೋಡುತ್ತಿಲ್ಲ. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಬೇಕು. ಕಿತ್ತೂರು ಕರ್ನಾಟಕ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಗಡಿ ವಿವಾದಗಳು ಇದ್ದಾಗಲೂ ಮುಂಬೈ ಕರ್ನಾಟಕ ಅನ್ನಬಾರದು ಎಂದು ತಿಳಿಸಿದರು. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕು. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಬಾರದವರಿಗೆ ಕನ್ನಡ ಭಾಷೆಯನ್ನು ಕಲಿಸಬೇಕು. ಕನ್ನಡಿಗರಿಗೆ ಕೆಲಸ ಕೊಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ಕರ್ನಾಟಕ, ಕನ್ನಡ ಅಭಿವೃದ್ಧಿಯಾಗುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ಇದು ನಮ್ಮ ಸರ್ಕಾರ ಮಾಡಿದೆ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದರು.

ರಾಜ್ಯದ ವಿದ್ಯಾರ್ಥಿಗಳು ಯಾವುದರಲ್ಲೂ ಹಿಂದುಳಿಯಬಾರದು. ಕನ್ನಡಿಗರಿಗೆ ಹೆಚ್ಚು ಅವಕಾಶಗಳು ಸಿಗುವಂತೆ ನಮ್ಮ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿಯೂ ಕನ್ನಡ ಭಾಷೆ ಇರಬೇಕು. ರಾಜ್ಯದಲ್ಲಿರುವ ಕನ್ನಡಿಗರಿಗೆ ಉತ್ತಮವಾದ ಆಡಳಿತ ಸಿಗಬೇಕು ಮೈಸೂರು ಕರ್ನಾಟಕದಲ್ಲಿ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

 

Comments are closed.