ಮಂಗಳೂರು: ನಕ್ಸಲರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ನಕ್ಸಲ್ ನಿಗ್ರಹ ಪಡೆಯಿಂದ 2012ರಲ್ಲಿ (ಎಎನ್ಎಫ್) ಬಂಧನಕ್ಕೊಳಗಾಗಿದ್ದ ಪತ್ರಕರ್ತ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು ಮಂಗಳೂರಿನ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ ಜಕಾತಿ ಈ ತೀರ್ಪು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಟ್ಲೂರು ನಿವಾಸಿಗಳಾದ ವಿಠ್ಠಲ ಮಲೆಕುಡಿಯ ಮತ್ತು ಆತನ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ವಿಠಲ್ ಅವರನ್ನು ಮಾರ್ಚ್ 3, 2012 ರಂದು ಎಎನ್ಎಫ್ ಬಂಧಿಸಿತ್ತು ಮತ್ತು ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ವಿಠಲನನ್ನು 6ನೇ ಮತ್ತು ಆತನ ತಂದೆ ಲಿಂಗಣ್ಣನನ್ನು ಪ್ರಕರಣದ 7ನೇ ಆರೋಪಿಯನ್ನಾಗಿ ಮಾಡಲಾಗಿತ್ತು.
ಬಂಧಿಸಿದ್ದ ಸಮಯದಲ್ಲಿ ವಿಠಲ ಮಲೆಕುಡಿಯ ಅವರು ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಜೈಲಿನಲ್ಲಿದ್ದ ಸಮಯದಲ್ಲಿ ಪರೀಕ್ಷೆಗೆ ಹಾಜರುಪಡಿಸಿದ್ದ ಪೊಲೀಸರು, ಕೈಕೊಳ ತೊಟ್ಟು ಪರೀಕ್ಷೆ ಬರೆಯುವಂತೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.