ಕರಾವಳಿ

ವಿರೋಧ ಪಕ್ಷದವರು ಟೋಪಿ‌ ಹಾಕಿ ಆಡಳಿತ ನಡೆಸಿದವರು; ಅವರ ಟೀಕೆಯಿಂದ RSS ಬೆಳೆದಿದೆ- ಸಚಿವ ಬಿ.ಸಿ ನಾಗೇಶ್

Pinterest LinkedIn Tumblr

ಕುಂದಾಪುರ: ಆರೆಸ್ಸೆಸ್ ಕುರಿತು ವಿಪಕ್ಷಗಳು ಟೀಕೆ ಮಾಡಿದಾಗಲೆಲ್ಲ ಸಂಘ ಮತ್ತಷ್ಟು ಬೆಳೆದಿದೆ. ಸುಳ್ಳು ಹೇಳಿ, ಟೋಪಿ ಹಾಕಿ ಆಡಳಿತ ನಡೆಸಿದವರಿಗೆ ಸತ್ಯವನ್ನು ಅರಗಿಸಿಕೊಳ್ಳಲು ಆಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದರು.

ಶುಕ್ರವಾರ ಕುಂದಾಪುರ ಜೂನಿಯರ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಗಾಂಧಿ ಹತ್ಯೆಗೂ ಆರ್‍ಎಸ್ಸೆಸ್‍ಗೂ ಸಂಬಂಧವಿಲ್ಲ ಎಂದು ಅಂದಿನ ಕಾಂಗ್ರೆಸ್ ಗೃಹಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಹೇಳಿದ್ದರು. ಸುಪ್ರೀಮ್ ಕೋರ್ಟ್ ಕೊಟ್ಟ ತೀರ್ಪಲ್ಲಿ ಗಾಂಧಿ ಹತ್ಯೆಗೂ ಆರ್‍ಎಸ್ಸೆಸ್ಸಿಗೂ ಸಂಬಂಧವಿಲ್ಲ ಎಂದಿದ್ದರು. ಸುಳ್ಳು ಹೇಳುವುದರಿಂದ ಸಂಘಕ್ಕೆ ಏನೂ ಸಮಸ್ಯೆ ಆಗಿಲ್ಲ. ಸಂಘದ ವಿರುದ್ಧ ಮಾಡಿದ ಆರೋಪದಿಂದ ಸಂಘ ಬೆಳೆದಿದೆಯೇ ಹೊರತು ಕುಗ್ಗಿಲ್ಲ. ವಿತ್ ಯೂ..ವಿತ್ ಔಟ್ ಯೂ. ಎಗೆನೆಸ್ಟ್ ಯೂ ಎಂಬ ಸಿಂಪಲ್ ಫಾರ್ಮೂಲಾದಲ್ಲಿ ಸಂಘ ಇದೆ ಎಂದರು.

ಅ.11ರಿಂದ ದಸರಾ ರಜೆ ಆರಂಭವಾಗಲಿದೆ, ರಜೆ ಮುಗಿದ ಬಳಿಕ ಕಿರಿಯ ಪ್ರಾಥಮಿಕ ಶಾಲೆಗಳೂ ಆರಂಭವಾಗಲಿವೆ ಎಂದರು.ಪಠ್ಯ ಕಡಿತದ ಕುರಿತು ಇನ್ನೂ ತೀರ್ಮಾನಿಸಿಲ್ಲ. ಕೊರೊನಾ ಮೂರನೆಯ ಅಲೆಯ ಭೀತಿ ಇನ್ನೂ ಮಾಸದ ಕಾರಣ ಡಿಸೆಂಬರ್ ಬಳಿಕ ನಿರ್ಧರಿಸಲಾಗುವುದು. ಪಠ್ಯ ಕಡಿತ ಪರೀಕ್ಷೆಗೆ ಮಾತ್ರ ಅನುಕೂಲವಿದ್ದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕ. ಆದ್ದರಿಂದ ರಜೆ ಕಡಿತ ಮಾಡಿ, ದಿನದಲ್ಲಿ 1 ತಾಸು ಹೆಚ್ಚು ತರಗತಿ ನಡೆಸಿ ಪೂರ್ಣಪಠ್ಯ ಬೋಧನೆಗೆ ಶ್ರಮಿಸಿದರೆ ಉತ್ತಮ ಎಂದರು.

ಶಾಲೆಗಳ ಜಾಗಗಳ ದಾಖಲಾತಿಯನ್ನು ಸಮರ್ಪಕವಾಗಿ ಮಾಡಿಕೊಡಲು ಡಿಸಿಗಳ ಜತೆ ಮಾತುಕತೆ ನಡೆಸಲಾಗಿದೆ. ಹೊಸಶಾಲೆಗಳಿಗೆ ಅನುಮತಿ ನೀಡುವಾಗ ಆಟದ ಮೈದಾನ, ಅಗ್ನಿಶಾಮಕ ದಳದ ಅನುಮತಿ ಸೇರಿದಂತೆ ಎಲ್ಲ ನಿಯಮ ಪರಿಶೀಲಿಸಿಯೇ ನೀಡಲಾಗುವುದು. ಖಾಸಗಿಯಿಂದ ಸರಕಾರಿ ಶಾಲೆಗೆ ಬಂದ ಟಿಸಿ ದೊರೆಯದ ಮಕ್ಕಳ ಟಿಸಿ ಕೊಡಿಸುವುದು ಇಲಾಖೆಯ ಜವಾಬ್ದಾರಿ ಎಂದರು.

ನಾಗರಿಕ ಮತ್ತು ಆಹಾರ ಪೂರೈಕೆ ನಿಗಮ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ ಮೆಂಡನ್,ಉಪಾಧ್ಯಕ್ಷ ಸಂದೀಪ ಖಾರ್ವಿ, ಮಾಜಿ ಅಧ್ಯಕ್ಷ ಮೋಹನದಾಸ್ ಶೆಣೈ, ಮೊದಲಾದವರಿದ್ದರು.

Comments are closed.