ಕರಾವಳಿ

ಕುಂದಾಪುರ ಮೊಬೈಲ್ ಅಂಗಡಿ ಮಾಲಿಕನ ಕಿಡ್ನಾಪ್ ಕೇಸ್:‌ ಅಹಮದಾಬಾದ್’ನಲ್ಲಿ ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರದಲ್ಲಿ ಮೊಬೈಲ್ ಎಕ್ಸ್ ಎನ್ನುವ ಮೊಬೈಲ್ ಶಾಪ್ ನಡೆಸುತ್ತಿದ್ದ ಮುಸ್ತಾಫ್ ಎನ್ನುವರನ್ನು ಅಪಹರಿಸಿ ಅವರಿಂದ 4 ಲಕ್ಷದ 64 ಸಾವಿರದ ನೂರ ಎಪ್ಪತ್ತೈದು ರೂಪಾಯಿ ಹಣ ಹಾಗೂ 1 ಲಕ್ಷ ಮೌಲ್ಯದ ಸೊತ್ತುಗಳು ಮತ್ತು ಅಮೂಲ್ಯ ದಾಖಲಾತಿಗಳನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ಪ್ರಮುಖ ‌ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ.

ಕೋಟೇಶ್ವರ ಮೂಲದ ಮುಕ್ತಾರ್ (35) ಪ್ರಕರಣದ ಪ್ರಮುಖ ಆರೋಪಿ. ಈತನೊಂದಿಗೆ ದೆಹಲಿ ಮೂಲದ 25 ವರ್ಷ ಪ್ರಾಯದ ಯುವತಿಯನ್ನು ಬಂಧಿಸಲಾಗಿದೆ.‌ ಇನ್ನು ಮೂವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕುಂದಾಪುರದ ಚಿಕನ್ ಸಾಲ್ ರಸ್ತೆಯಲ್ಲಿ ಮೊಬೈಲ್ ಏಕ್ಸ್ ಎಂಬ ಮೊಬೈಲ್ ಅಂಗಡಿಯನ್ನು ಹೊಂದಿರುವ ಮುಸ್ತಾಪ್ ಸೆ.17 ರಂದು ರಾತ್ರಿ 9.30ಕ್ಕೆ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ ಹಣ 50 ಸಾವಿರ ನಗದು, ಆಧಾರ್ ಕಾರ್ಡ್ , ಪಾನ್ ಕಾರ್ಡ್ 3-4 ಬ್ಯಾಂಕ್‌ಗಳ ಚೆಕ್ ಪುಸ್ತಕಗಳು ಹಾಗೂ ಇನ್ನಿತರ ಅಮೂಲ್ಯ ದಾಖಲಾತಿಯೊಂದಿಗೆ ಹಾಗೂ ಐಫೋನ್ -1, ಸ್ಯಾಮಸಂಗ್ ಮೊಬೈಲ್ ಫೋನ್ 1, ಆಪಲ್ ಸ್ಮಾರ್ಟ್ ವಾಚ್ -1 ಹಾಗೂ ಏರ್ ಪೋಡ್-1 ಇವುಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿಕೊಂಡು ಈ ತಂಡ ದೈಹಿಕ ಹಲ್ಲೆ ಮಾಡಿ ರಿವಾಲ್ವರ್ ತೋರಿಸಿ ಅಪಹರಿಸಿ ಬೆಂಗಳೂರಿನ ಲಾಡ್ಜಿಗೆ ಕರೆದೊಯ್ದು ದೋಚಿದ್ದರು. ಮೊಬೈಲ್, ದಾಖಲೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡ ಆರೋಪಿಗಳು ಸೆ.18ರಂದು ರಾತ್ರಿ 9:30ಕ್ಕೆ ಮುಸ್ತಾಫ್ ಅವರನ್ನು ಬಿಟ್ಟಿದ್ದು ಸ್ನೇಹಿತರ ಸಹಾಯದಿಂದ ಅವರು ಸೆ.19ಕ್ಕೆ ಊರು ಸೇರಿದ್ದು ಬಳಿಕ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

1000 ಕಿ.ಮೀ ಚೇಸಿಂಗ್…
ತನಿಖೆ ನಡೆಸಿದ ಪೊಲೀಸರು‌ ತಾಂತ್ರಿಕ ಮಾಹಿತಿ ಆಧಾರದಲ್ಲಿ ಆರೋಪಿಗಳ ಚಲನವಲನ ಗಮನಿಸಿದ್ದು ದೆಹಲಿಯಲ್ಲಿರುವುದು ತಿಳಿಯುತ್ತಲೆ ಅಲ್ಲಿಗೆ ತೆರಳಿದ್ದರು. ಆದರೆ ಪೊಲೀಸರು ಬೆನ್ನು ಬಿದ್ದ ಮಾಹಿತಿ ತಿಳಿಯುತ್ತಲೆ ಆರೋಪಿಗಳು ಪರಾರಿಯಾಗಲೆತ್ನಿಸಿದ್ದು ಅಲ್ಲಿ ಕಾರೊಂದನ್ನು‌ ಪಡೆದ ಪೊಲೀಸರು ಸುಮಾರು 1000 ಕಿಲೋಮೀಟರ್ ಹಿಂಬಾಲಿಸಿ ಅಹಮದಾಬಾದ್ ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಶುಕ್ರವಾರ ಕುಂದಾಪುರಕ್ಕೆ ಕರೆತರಲಾಗಿತ್ತು. ಸಂಜೆ ವೇಳೆಗೆ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದ್ದು ಇಬ್ಬರಿಗೆ ನ್ಯಾಯಾಂಗ ಬಂಧನ‌ ವಿಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಸೋಮವಾರ ಮತ್ತೆ ಇಬ್ಬರನ್ನು ತೆರೆದ ನ್ಯಾಯಾಲಯಕ್ಕೆ ಹಾಜರು ಮಾಡಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.

ಕಾರ್ಯಾಚರಣೆ ತಂಡ…
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ‌ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ತನಿಖಾಧಿಕಾರಿಯಾಗಿರುವ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಕೊಲ್ಲೂರು ಪಿಎಸ್ಐ ನಾಸೀರ್ ಹುಸೇನ್, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಸತೀಶ್, ಸಚಿನ್, ಮಹಿಳಾ ಹೆಡ್ ಕಾನ್ಸ್‌ಟೇಬಲ್ ಚಂದ್ರವತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿರಿ: 

ಕುಂದಾಪುರದ ಮೊಬೈಲ್ ಶಾಪ್ ಮಾಲಿಕನ ಅಪಹರಿಸಿ 4.5 ಲಕ್ಷ ನಗದು, ಮೊಬೈಲ್ ದೋಚಿದ ಆರೋಪ: 6 ಮಂದಿ ವಿರುದ್ಧ FIR ದಾಖಲು

Comments are closed.