ಕರಾವಳಿ

ಕುಂದಾಪುರ ಯುವ ಬಂಟರ ಸಂಘದಿಂದ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಯುವ ಬಂಟರ ಸಂಘ ಕುಂದಾಪುರ ತಾಲೂಕು ವತಿಯಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ನೂತನವಾಗಿ ಆಯ್ಕೆಯಾದ ಬಂಟ ಸಮುದಾಯದ ಗ್ರಾ.ಪಂ. ಸದಸ್ಯರು, ಪುರಸಭೆ ಸದಸ್ಯರು ಹಾಗೂ ಕೋವಿಡ್ ನಿರ್ವಹಣೆಯಲ್ಲಿ ನಿರಂತರವಾಗಿ ಶ್ರಮಿಸಿದ ಆಶಾ ಕಾರ‍್ಯಕರ್ತೆಯರಿಗೆ ಅಭಿನಂದನಾ ಸಮಾರಂಭ ಶನಿವಾರ ಇಲ್ಲಿನ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಕುಂದಾಪುರದ ಬಂಟರ ಸಮಾಜವು ನಮ್ಮ ಇಡೀ ಬಂಟ ಸಮುದಾಯಕ್ಕೆ ಒಂದು ದೊಡ್ಡ ಶಕ್ತಿಯಿದ್ದಂತೆ. ಇಲ್ಲಿಂದ ಸಾಕಷ್ಟು ಮಂದಿ ಜನಪ್ರತಿನಿಽಗಳು ಸಮಾಜದ ರಾಜಕೀಯದ ಉನ್ನತ ಮಟ್ಟಕ್ಕೇರಿದ್ದಾರೆ. ಈಗ ಗ್ರಾ.ಪಂ., ಪುರಸಭೆಯಲ್ಲಿ ಗೆದ್ದಿರುವ ಎಲ್ಲ ಸದಸ್ಯರು ನಮ್ಮ ಆಸ್ತಿಯಾಗಿದ್ದು, ಅವರನ್ನು ಹಾಗೂ ಆಶಾ ಕಾರ‍್ಯಕರ್ತೆಯರನ್ನು ಗುರುತಿಸಿ, ಗೌರವಿಸುತ್ತಿರುವುದು ಅಭಿನಂದನಾರ್ಹ ಎಂದರು.

ಬಂಟರ ಸಾಮರ್ಥ್ಯ, ಸಂಘಟನಾ ಚತುರತೆಯು ಅತ್ಯಮೋಘವಾದುದು. ಹಿಂದಿನ ಪೀಳಿಗೆ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆದು, ನಮ್ಮ ಈ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳ್ಳುವಲ್ಲಿ ಎಲ್ಲರ ಸಹಕಾರ ಅಗತ್ಯ. ಜನರ ಸೇವೆ ಮಾಡುವ ಜನಪ್ರತಿನಿಧಿಗಳು ಹಾಗೂ ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಶ್ರಮಿಸಿದ ಆಶಾ ಕಾರ‍್ಯಕರ್ತೆಯರನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ, ಕಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

ಹಲವರಿಗೆ ಸಮ್ಮಾನ
ಈ ಸಂದರ್ಭದಲ್ಲಿ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಗ್ರಾ.ಪಂ.ಗಳ ಒಟ್ಟು 192 ಸದಸ್ಯರು, ಇಬ್ಬರು ಪುರಸಭೆ ಹಾಗೂ 52 ಮಂದಿ ಆಶಾ ಕಾರ‍್ಯಕರ್ತೆಯರನ್ನು ಸಮ್ಮಾನಿಸಲಾಯಿತು. ಈ ವೇಳೆ ಆಶಾ ಕಾರ‍್ಯಕರ್ತೆಯರಿಗೆ ಗೌರವ ಧನವನ್ನು ಹಸ್ತಾಂತರಿಸಲಾಯಿತು.

ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಉಪಾಧ್ಯಕ್ಷೆ ಅಮೃತ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರ. ಕಾರ‍್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ವಿಜಯಾನಂದ ಶೆಟ್ಟಿ ಹಳ್ನಾಡು, ಕಂದಾವರ ಸತೀಶ್ ಶೆಟ್ಟಿ, ವತ್ಸಲಾ ದಯಾನಂದ ಶೆಟ್ಟಿ ಅಂಕದಕಟ್ಟೆ, ಯುವ ಬಂಟರ ಸಂಘದ ಗೌರವಾಧ್ಯಕ್ಷ ಡಾ| ರಂಜನ್ ಶೆಟ್ಟಿ, ಪ್ರ. ಕಾರ‍್ಯದರ್ಶಿ ಉದಯ ಕುಮಾರ್ ಶೆಟ್ಟಿ, ಕೋಶಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ, ಕಾರ‍್ಯಕ್ರಮದ ಸಂಚಾಲಕ ಮನೋರಾಜ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ತಾ| ಯುವ ಬಂಟರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ‍್ಯಕ್ರಮ ನಿರೂಪಿಸಿದರು.

Comments are closed.