ಕರಾವಳಿ

ಸೌಕೂರು ಏತನೀರಾವರಿ ಯೋಜನೆ ಮೂಲನಕ್ಷೆ ಬದಲಿಸಿದ್ದರಿಂದ ತಲ್ಲೂರು, ಉಪ್ಪಿನಕುದ್ರು ಜನರಿಗೆ ದ್ರೋಹ: ಗ್ರಾಮಸ್ಥರ ಆಕ್ರೋಷ

Pinterest LinkedIn Tumblr

ಕುಂದಾಪುರ: ಪ್ರತೀ ವರ್ಷ ಬೇಸಿಗೆಯಲ್ಲಿ ತಲ್ಲೂರು ಗ್ರಾ.ಪಂ‌ ವ್ಯಾಪ್ತಿಯ ಪಿಂಗಾಣಿಗುಡ್ಡೆ ಹಾಗೂ ಉಪ್ಪಿನಕುದ್ರು ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಾರೆ. ಉಪ್ಪಿನಕುದ್ರು ಜನರಿಗೆ ಉಪ್ಪು‌ನೀರು ಕುಡಿಯುವುದು ಅನಿವಾರ್ಯವಾಗಿದೆ. ಸೌಕೂರು ಏತ ನೀರಾವರಿ ಯೋಜನೆಯ ಮೂಲ‌ ಯೋಜನೆಯಂತೆ ತಲ್ಲೂರು‌ ಗ್ರಾ.ಪಂ ವ್ಯಾಪ್ತಿಗೆ ನೀರು ಕಲ್ಪಿಸಲು ಮೂಲನಕ್ಷೆ ತಯಾರಿಸಲಾಗಿತ್ತು. ಆದರೆ ರಾಜಕೀಯ ಸ್ವಹಿತಾಸಕ್ತಿಗಳಿಗಾಗಿ ಮೂಲ ಯೋಜನೆಯನ್ನು‌ ಕೈಬಿಟ್ಟಿದ್ದು ಇದು ತಲ್ಲೂ‌ರು ಗ್ರಾ.ಪಂ ವ್ಯಾಪ್ತಿಯ ಜನರಿಗೆ ಮಾಡಿದ ಅನ್ಯಾಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ತಲ್ಲೂರು ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಸೌಕೂರು ಏತ ನೀರಾವರಿ ಯೋಜನೆಯಲ್ಲಿ ತಲ್ಲೂರು ಗ್ರಾ.ಪಂ. ಸೇರ್ಪಡೆಗೊಳಿಸದ್ದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಈ ವೇಳೆ ಮಾತನಾಡಿದ ಗ್ರಾಮಸ್ಥ ಚಂದ್ರಮ ತಲ್ಲೂರು ಅವರು ಬೇಸಿಗೆಯಲ್ಲಿ ತಲ್ಲೂರು ಹಾಗೂ ಉಪ್ಪಿನಕುದ್ರು ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತದೆ. ಕೃಷಿಗೂ ತೊಂದರೆಯಾಗುತ್ತಿದೆ. ಆದರೂ ನಮ್ಮ ಗ್ರಾ.ಪಂ. ಅನ್ನು ಏತ ನೀರಾವರಿ ಯೋಜನೆಯಡಿ ಸೇರಿಸದಿರುವುದು ಅನ್ಯಾಯ ಎಂದರು. ಚರ್ಚೆ ಬಳಿಕ ತಲ್ಲೂರು ಗ್ರಾ.ಪಂ. ಸಹ ಏತ ನೀರಾವರಿ ಯೋಜನೆಯಡಿ ಸೇರಿಸಲು ಸೂಕ್ತ ಕ್ರಮಕೈಗೊಳ್ಳುವ ಸಲುವಾಗಿ ಶಾಸಕರಿಗೆ ಮನವಿ ಸಲ್ಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಸಭೆಗೂ ಮುಂಚಿತವಾಗಿ ನಮ್ಮಲ್ಲಿ ವಾರ್ಡ್ ಸಭೆ ನಡೆದಿತ್ತು. ಆ ಸಭೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಪಾಚಿಯ ಬಗ್ಗೆ ಪ್ರಸ್ತಾಪಿಸಿದ್ದೆವು. ಆದರೆ ಕಳೆದ 3 ದಿನಗಳಿಂದ ನಮ್ಮ ವಾರ್ಡ್‌ಗೆ ಕುಡಿಯುವ ನೀರೇ ಬರ್ತಿಲ್ಲ ಎನ್ನುವುದಾಗಿ 3ನೇ ವಾರ್ಡ್ ಪಿಂಗಾಣಿಗುಡ್ಡೆ ಭಾಗದ ಗ್ರಾಮಸ್ಥರು ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಭೀಮವ್ವ, ಈ ಕೂಡಲೇ ನಿಮ್ಮ ಭಾಗಕ್ಕೆ ಕುಡಿಯುವ ನೀರು ಪೂರೈಸುವ ಕುರಿತಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಒಂದನೇ ವಾರ್ಡ್ ಕಲ್ಕೇರಿ ಭಾಗದ ನಿವಾಸಿಗರು ಸಹ ಮಾತನಾಡಿ, ನಮ್ಮ ವಾರ್ಡಿಗೂ ಕಳೆದ 3 ದಿನಗಳಿಂದ ನೀರು ಬರ್ತಿಲ್ಲ. ಇದೆಂಥ ನಿಮ್ಮ ಜನಸೇವೆ, ಕಳೆದ ಅನೇಕ ವರ್ಷಗಳಿಂದ ನಮ್ಮ ಮನೆ ಎದುರಿನ ತೋಡಿನಲ್ಲಿ ಕಸ, ಕಡ್ಡಿಗಳೆಲ್ಲ ಬಂದು ರಾಶಿ ಬೀಳುತ್ತವೆ. ಮನೆಗೆ ತೆರಳುವ ರಸ್ತೆಯೂ ಅಭಿವೃದ್ಧಿಯಾಗಿಲ್ಲ ಎಂದು ಪ್ರಸ್ತಾಪಿಸಿದರು. ಅನುದಾನ ಮೀಸಲಿಡಲಾಗಿದ್ದು, ಮಳೆ ಕಡಿಮೆಯಾದ ಕೂಡಲೇ ರಸ್ತೆ ಕಾಮಗಾರಿ ನಡೆಸಲಾಗುವುದು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು ಹೇಳಿದರು.

ತಲ್ಲೂರು ಗ್ರಾ.ಪಂ.ಗೆ ಕಳೆದ ಅನೇಕ ವರ್ಷಗಳಿಂದ ಪ್ರಭಾರ ನೆಲೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕಾರ್‍ಯನಿರ್ವಹಿಸುತ್ತಿದ್ದಾರೆ. ಖಾಯಂ ಆಗಿರುವ ಪಿಡಿಒ ನೇಮಕ ಈವರೆಗೆ ಆಗಿಲ್ಲ. ಇದರಿಂದ ಗ್ರಾಮದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅನೇಕ ಮಂದಿ ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದರು. 15 ದಿನದೊಳಗೆ ನೇಮಕ ಮಾಡಿಕೊಡುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.

ಇಡೀ ಗ್ರಾಮದ ಕಸವನ್ನು ತಂದು ಇಲ್ಲಿನ ಅಂಗನವಾಡಿ ಬಳಿ ರಾಶಿ ಹಾಕುತ್ತಿದ್ದೀರಾ. ಈಗ ಮಕ್ಕಳು ಬರದ ಕಾರಣ ತೊಂದರೆಯಾಗಿಲ್ಲ. ಆದರೆ ಅಂಗನವಾಡಿ ಆರಂಭವಾದರೆ ಮಕ್ಕಳಿಗೆಲ್ಲ ರೋಗ ಹರಡುವ ತಾಣವಾಗಬಹುದು ಎಂದು ತಾ.ಪಂ. ಮಾಜಿ ಸದಸ್ಯ ಕರಣ್ ಪೂಜಾರಿ ಪ್ರಸ್ತಾಪಿಸಿದರು. ಇದಕ್ಕುತ್ತರಿಸಿದ ಪಿಡಿಒ ನಾಗೇಂದ್ರ ಅವರು, ಅಂಗನವಾಡಿ ಬಳಿ ತಾತ್ಕಲಿಕವಾಗಿ ಕಸ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಪಂಚಾಯತ್‌ನ ಕಸ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ. ಗ್ರಾಮಸ್ಥರು ಹಸಿ ಕಸ, ಒಣ ಕಸ ವಿಂಗಡಿಸಿ, ಒಣ ಕಸ ಮಾತ್ರ ಕೊಡಬೇಕು ಎಂದು ವಿನಂತಿಸಿದರು.

ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ ನೋಡಲ್ ಅಧಿಕಾರಿಯಾಗಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ನಾಯ್ಕ್, ಗ್ರಾ.ಪಂ. ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.