ಕರ್ನಾಟಕ

ನಾಯಂಡನಹಳ್ಳಿ-ಕೆಂಗೇರಿ 7.5 ಕಿ.ಮೀ ಮೆಟ್ರೋ ನೇರಳೆ ಮಾರ್ಗಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Pinterest LinkedIn Tumblr

ಬೆಂಗಳೂರು: ಉದ್ಯಾನನಗರಿಯಲ್ಲಿ ಮೆಟ್ರೋ (ನಮ್ಮ ಮೆಟ್ರೋ) ಪ್ರಯಾಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವವರಿಗೆ ಇಂದಿನಿಂದ ಹೊಸ ಮಾರ್ಗವೊಂದು ಲೋಕಾರ್ಪಣೆಗೊಂಡಿದೆ.

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ ಮೀ ಮೆಟ್ರೋ ನೇರಳೆ ಮಾರ್ಗವನ್ನು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ‌ ಹಾಗೂ ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ, ಕೆ.ಗೋಪಾಲಯ್ಯ, ಮುನಿರತ್ನ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಮುನಿರಾಜುಗೌಡ, ಲೆಹರ್ ಸಿಂಗ್ ಸಿರೋಯಾ, ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು

ಇಂದು ಉದ್ಘಾಟನೆಯಾದ ಈ ಮಾರ್ಗ ಸೋಮವಾರ ಬೆಳಗ್ಗೆ 7ರಿಂದ ಜನರ ಸೇವೆಗೆ ಅಧಿಕೃತವಾಗಿ ಲಭ್ಯವಾಗಲಿದ್ದು, ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಆಗಸ್ಟ್ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡಿರುವ ಕಾರಣ ಪ್ರಯಾಣಿಕ ಬಳಕೆಗೆ ಮಾರ್ಗವನ್ನು ಅನುವು ಮಾಡಿಕೊಡಲಾಗಿದೆ. ಒಟ್ಟು 7.53 ಕಿ.ಮೀ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಮಾರ್ಗವು 1,560 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬಿಎಂಆರ್​ಸಿಎಲ್ ಕಳೆದ ಮೂರು ತಿಂಗಳಿನಿಂದ ಟ್ರಯಲ್ ರನ್ ನಡೆಸಿದೆ.

ನಾಯಂಡಹಳ್ಳಿ- ಕೆಂಗೇರಿ ಮೆಟ್ರೋ ರೈಲು ಸಂಚಾರ ಸೇವೆಯು ಹತ್ತು ನಿಮಿಷಗಳಿಗೆ ಒಂದು ರೈಲು ಕಾರ್ಯಚರಿಸಲು ಮೆಟ್ರೋ ನಿಗಮ ನಿರ್ಧರಿಸಿತ್ತು. ಆದರೆ ಈಗ ಪ್ರಯಾಣಿಕರ ದಟ್ಟಣೆ ನೋಡಿ ರೈಲು ಸಂಚಾರ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

ಇನ್ನಿತರ ಸಮಯದಲ್ಲಿ 10 ನಿಮಿಷಗಳಿಗೆ ಒಂದರಂತೆ ರೈಲು ಸಂಚಾರ ಇರುತ್ತದೆ. ಅಂದರೆ ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಬೆಳಿಗ್ಗೆ 7 ರಿಂದ 11 ಗಂಟೆ ಮತ್ತು ಸಂಜೆ 4.30 ರಿಂದ 7.30 ರವರೆಗೆ ಇರಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ 5 ರಿಂದ 8 ನಿಮಿಷಗಳಿಗೆ ಒಂದರಂತೆ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ರೈಲು ಸಂಚರಿಸಲಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೋ ರೈಲುಗಳು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಡುವೆ ಮಾತ್ರ ಸಂಚರಿಸಲಿದೆ. ಅನಿವಾರ್ಯತೆ ಇದ್ದಾಗ ಮಾತ್ರ ಕಡಿಮೆ ಸಮಯಕ್ಕೆ ಒಂದರಂತೆ ರೈಲು ಸಂಚರಿಸಲು ಬಿಎಂಆರ್​ಸಿಎಲ್ ಕ್ರಮಕೈಗೊಳ್ಳಲಿದೆ. 7.5 ಕಿಲೋಮೀಟರ್ ವಿಸ್ತರಿಸಿದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಿದರೆ, ಒಟ್ಟು 55 ಕಿಲೋಮೀಟರ್ ಬಿಎಂಆರ್​ಸಿಎಲ್ ನಗರದಲ್ಲಿ ಮೆಟ್ರೋ ಸಂಚರಿಸಿದಂತಾಗುತ್ತದೆ.

ಇನ್ನು ವಿಸ್ತರಿಸಿದ ನೇರಳೆ ಮಾರ್ಗದ ಪ್ರಯಾಣ ದರವನ್ನು ನಿಗದಿ ಪಡಿಸಲಾಗಿದ್ದು, ಬೈಯಪ್ಪನಹಳ್ಳಿಯಿಂದ ಕೇಂಗೇರಿಗೆ 56 ರೂಪಾಯಿ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ 45 ರೂಪಾಯಿ ಟಿಕೆಟ್ ದರವಿದೆ. ಅದರಂತೆ ಮೈಸೂರು ರಸ್ತೆಯಿಂದ ಕೆಂಗೇರಿವಗರೆಗೆ 6 ಮೆಟ್ರೋ ನಿಲ್ದಾಣಗಳು ಬರಲಿದೆ.

55 ಕಿಲೋಮೀಟರ್ ಸಂಚಾರ ಸಂಪರ್ಕ ಸಾಧಿಸಿರುವ ಪೈಕಿ ದೆಹಲಿ ಹಾಗೂ ಹೈದರಾಬಾದ್ ಮೊದಲೆರಡು ಸ್ಥಾನ ಕಾಯ್ದುಕೊಂಡಿದೆ. ಬೆಂಗಳೂರು ಮೆಟ್ರೋ ನಂತರದ ಸ್ಥಾನದಲ್ಲಿದೆ. ನಾಗಸಂದ್ರ -ರೇಷ್ಮೆ ಸಂಸ್ಥೆ ವರೆಗಿನ ಹಸಿರು ಮಾರ್ಗ 30 ಕಿಲೋಮಿಟರ್, ಬೈಯಪ್ಪನಹಳ್ಳಿ ಕೆಂಗೇರಿವರೆಗಿನ ನೇರಳೆ ಮಾರ್ಗ 25 ಕಿಲೋಮೀಟರ್ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.