ಕರಾವಳಿ

ರಸ್ತೆ ಬದಿ ರಿಕ್ಷಾವಿಟ್ಟು ನಾಪತ್ತೆಯಾಗಿದ್ದ ವಕ್ವಾಡಿಯ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

Pinterest LinkedIn Tumblr

ಕುಂದಾಪುರ: ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಆಟೋ ಚಾಲಕ ಯುವಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು ಮಂಗಳವಾರ ಕುಂದಾಪುರ ತಾಲೂಕಿನ ವಕ್ವಾಡಿ-ಕಾಳಾವರ ರಸ್ತೆ ಸಮೀಪದ ಸರಕಾರಿ ಹಾಡಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ವಕ್ವಾಡಿ ನವನಗರ ನಿವಾಸಿ ರವಿಚಂದ್ರ ಕುಲಾಲ್ (33) ಆತ್ಮಹತ್ಯೆಗೆ ಶರಣಾದ ಯುವಕ.

ಘಟನೆ ವಿವರ: ವಕ್ವಾಡಿ ರಿಕ್ಷಾ ನಿಲ್ದಾಣದಿಂದ ಆಟೋ ಚಾಲಕರಾಗಿದ್ದ ರವಿಚಂದ್ರ ಕುಲಾಲ್ ಸೋಮವಾರ ಮಧ್ಯಾಹ್ನದ ಸುಮಾರಿಗೆ ತನ್ನ ಆಟೋ ರಿಕ್ಷಾವನ್ನು ವಕ್ವಾಡಿ ನವನಗರ ತಿರುವಿನಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ತನ್ನ ವಾಟ್ಸಾಪ್ ಸ್ಟೇಟಸ್’ನಲ್ಲಿ ಗುಡಾರ್ಥದ ಬರಹಗಳನ್ನು ಬರೆದುಕೊಂಡಿದ್ದರಿಂದ ಅನುಮಾನಗೊಂಡ ಸ್ನೇಹಿತರು ಹಾಗೂ ಕುಟುಂಬಿಕರು ನಿರಂತರವಾಗಿ ಕರೆ ಮಾಡಿದರೂ ಕೂಡ ರವಿಚಂದ್ರ ಕರೆ ಸ್ವೀಕರಿಸಿರಲಿಲ್ಲ. ಕೊನೆಗೆ ಸ್ನೇಹಿತರು, ಕುಟುಂಬಿಕರು ತಂಡೋಪತಂಡವಾಗಿ ವಕ್ವಾಡಿ ಭಾಗದಲ್ಲಿ ಹುಡುಕಾಟ ನಡೆಸಿದ್ದು ಸುಮಾರು 200-300 ಜನರ ತಂಡ ಮಧ್ಯ ರಾತ್ರಿವರೆಗೆ ಹುಡುಕಾಡಿದ್ದರು. ಮಂಗಳವಾರ ಬೆಳಿಗ್ಗೆ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿಚಂದ್ರ ಕುಲಾಲ್ ಮೃತದೇಹ ಪತ್ತೆಯಾಗಿದೆ. ಘಟನೆ ಸ್ಥಳಕ್ಕೆ ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ‌ತಿಳಿದುಂಬದಿಲ್ಲ. ಆತ್ಮಹತ್ಯೆ ಸಲುವಾಗಿಯೇ ಸೋಮವಾರ ಬೆಳಿಗ್ಗೆ ಹೊಸ ನೈಲಾನ್ ಹಗ್ಗ ಖರೀದಿಸಿದ್ದರು ಎಂಬ ಮಾಹಿತಿಯಿದೆ.

ವಿವಾಹಿತರಾಗಿದ್ದ ರವಿಚಂದ್ರ ಕುಲಾಲ್ ಅವರಿಗೆ 8 ತಿಂಗಳ ಗಂಡು ಮಗುವಿದೆ. ತಂದೆ, ತಾಯಿ ಹಾಗೂ ಮೂವರು ಸೋದರರು, ಗೆಳೆಯರನ್ನು ರವಿಚಂದ್ರ ಕುಲಾಲ್ ಅಗಲಿದ್ದಾರೆ. ವಕ್ವಾಡಿ ಹೆಗ್ಗಾರಬೈಲಿನ ಯುವಶಕ್ತಿ ಮಿತ್ರ ಮಂಡಲದ ಉಪಾಧ್ಯಕ್ಷರಾಗಿದ್ದ ರವಿಚಂದ್ರ ಸಂಘಟನಾ ಚತುರ ಹಾಗೂ ಉತ್ತಮ ನಿರೂಪಕನಾಗಿದ್ದರು.

Comments are closed.