ಕರಾವಳಿ

ಫೈನಾನ್ಸ್ ಹಣಕಾಸು ವಿಚಾರಕ್ಕೆ ನಡೆದಿತ್ತು ಅಜೇಂದ್ರ ಶೆಟ್ಟಿ ಕೊಲೆ; ಗೋವಾದಲ್ಲಿ ಆರೋಪಿ ಬಂಧನ- ಎಸ್ಪಿ ವಿಷ್ಣುವರ್ಧನ್

Pinterest LinkedIn Tumblr

ಉಡುಪಿ: ಫೈನಾನ್ಸಿನ ಹಣಕಾಸು ವಿಚಾರದಲ್ಲಿ ಮನಸ್ತಾಪ ಉಂಟಾಗಿ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿದ್ದಾಗಿ ಪಾಲುದಾರ ಅನೂಪ್‌ ಶೆಟ್ಟಿ ಒಪ್ಪಿಕೊಂಡಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌ ವಿಷ್ಣುವರ್ಧನ್‌ ಹೇಳಿದರು.

ಅವರು ಸೋಮವಾರ ಉಡುಪಿ‌ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜುಲೈ 30ರಂದು ರಾತ್ರಿ ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದಿನ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್ ಕಛೇರಿಯೊಳಗೆ ಫೈನಾನ್ಸ್ ನಡೆಸಿಕೊಂಡಿದ್ದ ಅಜೇಂದ್ರ ಶೆಟ್ಟಿಯನ್ನು ಮಾರಕಾಯುಧದಿಂದ ಕಡಿದು ಕೊಲೆ ಮಾಡಿ ಅಜೇಂದ್ರ ಶೆಟ್ಟಿಯ ಕೊರಳಿನಲ್ಲಿದ್ದ ಚಿನ್ನದ ಚೈನ್ ಮತ್ತು ಅವರ ಹೊಸ ಹೊಂಡಾ ಸಿಟಿ ಕಾರನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು, ಈ ಘಟನೆ ಬಳಿಕ ಈ ಫೈನಾನ್ಸ್ ನಲ್ಲಿ ಪಾಲುಗಾರಿಕೆ ಮಾಡಿಕೊಂಡಿದ್ದ ಅನೂಪ್ ಪಟ್ಟಿಯು ತಲೆಮರೆಸಿಕೊಂಡಿದ್ದರಿಂದ ಈತನ ವಿರುದ್ಧ ಅಜೇಂದ್ರ ಶೆಟ್ಟಿಯ ಅಣ್ಣ ಮಹೇಂದ್ರ ಶೆಟ್ಟಿಯು ನೀಡಿರುವ ದೂರಿನಂತೆ ಕುಂದಾಪ್ರರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿಯ ಬಂಧನಕ್ಕಾಗಿ ಕುಂದಾಪುರ ಪೊಲೀಸ್ ಉಪಾಧೀಕ್ಷಕ ಕೆ. ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷರಾದ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ, ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನು ಜುಲೈ 31 ರಂದು ಗೋವಾ ರಾಜ್ಯದ ಕೋಲ್ವಾ ಬೀಚ್‌ ಬಳಿ ಬಂಧಿಸಲಾಗಿದೆ ಎಂದರು.

ಆರೋಪಿ ಸುಲಿಗೆ ಮಾಡಿಕೊಂಡು ಹೋಗಿರುವ ಕಾರನ್ನು ವಿಶೇಷ ತಂಡದಲ್ಲಿದ್ದ ಬೈಂದೂರು ಸಿಪಿಐ ತಂಡ ವಶಕ್ಕೆ ಪಡೆದುಕೊಂಡಿದೆ. ಪ್ರಕರಣ ವರದಿಯಾದ 24 ಗಂಟೆಯೊಳಗಾಗಿ ಬೇದಿಸುವಲ್ಲಿ ಯಶಸ್ವಿಯಾಗಿ ಸಾರ್ವಜನಿಕರ ಪ್ರಶಂಸೆಗೊಳಗಾಗಿರುತ್ತಾರೆ ಎಂದರು.

(ಕೊಲೆಯಾದ ಅಜೇಂದ್ರ)

ಈ ವಿಶೇಷ ತಂಡದಲ್ಲಿ ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ, ಗಂಗೊಳ್ಳಿ ಪಿಎಸ್ಐ ನಂಜನಾಯ್ಕ, ಕುಂದಾಪುರ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ನಿರಂಜನ ಗೌಡರವರೊಂದಿಗೆ ಉಪವಿಭಾಗದ ಸಿಬ್ಬಂದಿಗಳಾದ ಮೋಹನ, ಚಂದ್ರಶೇಖರ ನಾಗೇಂದ್ರ, ಶ್ರೀನಿವಾಸ, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್, ಚಿದಾನಂದ, ಮಧುಸೂಧನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್‌ ಸಹಕರಿಸಿದ್ದರು ಎಂದರು.

Comments are closed.