ಕರಾವಳಿ

5-6 ಕಿ.ಮೀ ನಡೆದುಕೊಂಡೇ ಕೋಟತಟ್ಟು ಪಡುಕರೆ- ಕೋಡಿ ಕನ್ಯಾಣದವರೆಗಿನ ರಸ್ತೆ ವೀಕ್ಷಿಸಿದ ಸಚಿವ ಕೋಟ

Pinterest LinkedIn Tumblr

ಉಡುಪಿ: ಕೋಟತಟ್ಟು ಗ್ರಾಮಪಂಚಾಯತ್ ನ ಪಡುಕರೆಯಿಂದ ಕೋಡಿ ಕನ್ಯಾಣದವೆರೆಗಿನ ಕರಾವಳಿ ರಸ್ತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಫಾರಸ್ಸಿನ ಮೇರೆಗೆ ಆಗಿನ ಮೀನುಗಾರಿಕಾ ಸಚಿವ ಪ್ರಸ್ತುವ ಹಿಂದುಳಿದ ವರ್ಗಗಳ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಮಾರು 7 ಕೋಟಿ ರೂ ಬಿಡುಗಡೆಗೊಳಿಸಿದ್ದು ಸುಮಾರು 5 ಕಿಮೀ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಇದೀಗ ಪೂರ್ಣಗೊಂಡಿದೆ.

ಮಂಗಳವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಪಡುಕರೆಯಿಂದ ಕೋಡಿ ಕನ್ಯಾಣದವರೆಗೆ ಸುಮಾರು 5-6ಕಿಮೀ ಪಾದಯಾತ್ರೆ ಮೂಲಕ ಸಂಚರಿಸಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಆಯಾ ಭಾಗಗಳಲ್ಲಿ ಅಲ್ಲಿನ ಸ್ಥಳೀಯರು ಸಚಿವರಿಗೆ ಪುಷ್ಭಗುಚ್ಛ ನೀಡಿ ಹಾರಹಾಕಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳಾಗಿ ತಮ್ಮ ಅನುಭವದ ವಿಚಾರಧಾರೆಯ ಮೇರೆಗೆ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಉಸ್ತುವಾರಿ ಮಂತ್ರಿಗಳಿಗೆ ತಮ್ಮ ತಮ್ಮ ಜಿಲ್ಲೆ ಹಾಗೂ ಅವರವರ ಕ್ಷೇತ್ರದ ಬಗ್ಗೆ ಗಮನ ಕೊಡಲು ಹೇಳಿದ್ದಾರೆ. ಕೋವಿಡ್ ನಿಯಂತ್ರಣವೂ ಸೇರಿದಂತೆ ಅಭಿವೃದ್ಧಿಗಳ ಬಗೆಗೆ ಹೆಚ್ಚು ಗಮನ ಕೊಡುವ ಅವಶ್ಯಕತೆ ಇದೆ. ನಾವು ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಿದ್ದೇವೆ. ಪಾರ್ಟಿಯಲ್ಲಿ ಏನಾದರೂ ನಾಯಕ, ನಾಯಕತ್ವದ ಚರ್ಚೆಗಳು ಬಂದಾಗ ನಳಿನ್ ಕುಮಾರ್ ಅವರು ಹಾಗೂ ರಾಷ್ಟ್ರೀಯ ಅಧ್ಯಕ್ಷರು, ಹೈಕಮಾಂಡ್ ಅದರ ಬಗ್ಗೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.‌ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮ ಒಬ್ಬ ಅತ್ಯುತ್ತಮ ಆಡಳಿತ ಕೊಡೋ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಪಕ್ಷ ಸಂಘಟನೆ ಇದೆ. ಎಲ್ಲಾ ಶಾಸಕರು, ಎಂಪಿ, ಮಂತ್ರಿಗಳೆಲ್ಲಾ ನಮ್ಮನಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದೇವೆ ಎಂದರು.

ಮೀನುಗಾರರ ಸಮಸ್ಯೆಗೆ ಸಹಾಯ:
ಡಿಕೆಶಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮಿತ್ರರ ವಾಸ್ತವಿಕತೆಯತೆ ಮರೆಮಾಚಬಾರದು. ಬಿಜೆಪಿ ಸರ್ಕಾರ ಮೀನುಗಾರರ ಎಲ್ಲಾ ಸವಲತ್ತುಗಳ ಬಗ್ಗೆ ಶಕ್ತಿ ಮೀರಿ ಸಹಕಾರ ಕೊಟ್ಟಿದೆ. ಸಹಾಯ ಮಾಡಿದೆ. ನಾನು ಮೀನುಗಾರಿಕಾ ಸಚಿವರಾಗಿದ್ದ ವೇಳೆ ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಕಿರು ಬಂದರಿಗಾಗಿ, ಕೋವಿಡ್ ಸಂದರ್ಭದಲ್ಲೂ 181 ಕೋ.ರೂ. ಬಿಡುಗಡೆ ಮಾಡಿ, ಟೆಂಡರ್ ಮಾಡಿ, ಮುಖ್ಯಮಂತ್ರಿಗಳೇ ಶಿಲಾನ್ಯಾಸ ಮಾಡಿದ್ದಾರೆ. ಇದು ಐತಿಹಾಸಿಕ ವಿಚಾರ. ಕೋಡಿ ಕನ್ಯಾಣದಲ್ಲಿರುವ ಜಟ್ಟಿ, ಹೂಳೆತ್ತುವ ಕಾಮಗಾರಿ ಸಿ ಆರ್ ಝಡ್ ಹಾಗೂ ಹಸಿರು ಪೀಠದ ಸಮಸ್ಯೆಯಿಂದಾಗಿ ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿತ್ತು. ಇದೀಗ ನಾನು, ಸಚಿವ ಅಂಗಾರ ಅವರು ಸೇರಿ ಅದರ ಹೂಳೆತ್ತುವ ಬಗ್ಗೆ ಯೋಜನೆಯನ್ನು ರೂಪಿಸುತ್ತಿದ್ದೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಪ್ರಥಮ ಹಂತದಲ್ಲೇ ಶಾಸಕರ ವಿನಂತಿ ಮೇರೆಗೆ 23,000 ಜನರಿಗೆ 60 ಕೋ. ಮಹಿಳಾ ಮೀನುಗಾರರ ಸಾಲಮನ್ನಾ ಮಾಡಿದ್ದಾರೆ. 22,000 ಜನರಿಗೆ ಈಗಾಗಲೇ ಸಿಕ್ಕಿದೆ. ತಾಂತ್ರಿಕ ಕಾರಣದಿಂದ ಒಂದೆರಡು ಸಾವಿರ ಮಂದಿಗೆ ಹೆಚ್ಚು ಕಡಿಮೆಯಾಗಿರಬಹುದು. ಅದನ್ನು ಪರಿಶೀಲಿಸಿ ಕೊಡುವ ಕೆಲಸವನ್ನು ಮಾಡುತ್ತೇವೆ. ಬಹಳ ವರ್ಷಗಳಿಂದ ಉಳಿತಾಯ ಪರಿಹಾರ ಯೋಜನೆಗಳು ನೆನೆಗುದಿಗೆ ಬಿದ್ದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಆ ಪರಿಹಾರ ಕೊಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಬೋಟ್ ಆಂಬುಲೆನ್ಸ್ ಮಾಡುವ ಬಗೆಗೂ ಪ್ರಸ್ತಾಪನೆ ನೀಡುತ್ತೇವೆ. ಮೀನುಗಾರರ ಪರವಾಗಿ ನಮ್ಮ ಸರ್ಕಾರ ಶಕ್ತಿ ಮೀರಿ ಕೆಲಸಗಳನ್ನು ಮಾಡುತ್ತಿದೆ ಎಂದರು.

ರಸ್ತೆ ಕಾಮಗಾರಿ ಬಗ್ಗೆ ವ್ಯಾಪಕ ಪ್ರಶಂಸೆ
ಸುಮಾರು 5 ಕಿಮೀ ದೂರ 6 ಮೀಟರ್ ವಿಸ್ತೀರ್ಣದ ರಸ್ತೆ ಕಾಮಗಾರಿ ನಿರ್ಮಿತಿಕೇಂದ್ರದ ವತಿಯಿಂದ ನಡೆದರೂ ಸ್ಥಳೀಯ ಮುಖಂಡ ಐರೋಡಿ ವಿಠ್ಠಲ್ ಪೂಜಾರಿಯವರ ವಿಶೇಷ ಕಾಳಜಿ ಮೂಲಕ ರಸ್ತೆಕಾಮಗಾರಿಯ ಯಶಸ್ವಿಯಾಗಿ ಪೂರೈಸಿ ಹೆಗ್ಗಳಿಕೆ ಇವರದ್ದಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಇಷ್ಟು ದೊಡ್ಡ ಕಾಮಗಾರಿಯನ್ನು ತನ್ನ ವಿಶೇಷ ಮುತುವರ್ಜಿಯಲ್ಲಿ ನಡೆಸಿಕೊಟ್ಟ ಬಗ್ಗೆ ಕೋಡಿ ಚಂದ್ರಶೇಖರ್ ನಾವಡ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಅಶ್ವಿನಿ ದಿನೇಶ್,ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ,ಸದಸ್ಯೆ ರೇಖಾ ಕೇಶವ ಕರ್ಕೇರ,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಪ್ರಭಾಕರ ಮೆಂಡನ್,ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷ ವಾಸು ಪೂಜಾರಿ,ಸದಸ್ಯರಾದ ಪ್ರಕಾಶ್ ಹಂದಟ್ಟು ಸತೀಶ್ ಕುಂದರ್,ಪೂಜಾ ಪೂಜಾರಿ ಹಂದಟ್ಟು, ವಿದ್ಯಾ ಸಾಲಿಯಾನ್, ಸಾಹೀರಾಬಾನು, ರಾಬರ್ಟ್ ನಾಯ್ಕ್, ಜ್ಯೋತಿ, ಸೀತಾ,ಪ್ರಮೋದ್ ಹಂದೆ, ಸಂತೋಷ್ ಪ್ರಭು,ಚಂದ್ರ ಪೂಜಾರಿ,ಜಯರಾಮ ಶೆಟ್ಟಿ, ಬೈಂದೂರು ತಾ.ಪಂ‌ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ,ಉಡುಪಿಯ ಎ.ಪಿ ಎಮ್ ಸಿ ಉಪಾಧ್ಯಕ್ಷ ಕೃಷ್ಣ ಪೂಜಾರಿ,
ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ,ಪ್ರಧಾನಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಕೋಟತಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ರಘು ತಿಂಗಳಾಯ,ಬಿಜೆಪಿ ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ,ಸ್ಥಳೀಯ ಮುಖಂಡರಾದ ಕೇಶವ ಕರ್ಕೇರ,ಶಿವಮೂರ್ತಿ ಕೆ,ಶ್ರೀನಿವಾಸ್ ಪೂಜಾರಿ ,ನಾಗೇಶ್ ಪೂಜಾರಿ,ಸತೀಶ ತೋಳಾರ್,ರಾಮಬಂಗೇರ,ಸುರೇಂದ್ರ ಕೋಡಿ,ಜಗನಾಥ್ ಅಮೀನ್,ಉದಯ್ ತಿಂಗಳಾಯ,ಚಂದ್ರ ಪುತ್ರನ್,ಉದಯ್ ತಿಂಗಳಾಯ ಪಡುಕರೆ,ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್ ಶೆಟ್ಟಿ ಮೊದಲಾದವರು ಇದ್ದರು.

ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

 

Comments are closed.