ಕರಾವಳಿ

ಜುಲೈ 14 : ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ರೈತ ಸ್ಪಂದನ ಕಾರ್ಯಕ್ರಮ – ಕೃಷಿಕರಿಗೆ ವಿವಿಧ ರೀತಿಯ ಸಾಲ ವಿತರಣೆ

Pinterest LinkedIn Tumblr

ಮಂಗಳೂರು. ಜುಲೈ.12: ಸಹಕಾರಿ ಕ್ಷೇತ್ರದ ಬಲವರ್ಧನೆಗೆ ತನ್ನದೇ ಆದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ರಾಜ್ಯಕ್ಕೆ ಮಾದರಿಯಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ರೈತ ಸ್ಪಂದನ ಕಾರ್ಯಕ್ರಮದ ಮೂಲಕ ಜನರಿಗೆ ಇನ್ನಷ್ಟು ಉತ್ತಮ ತ್ವರಿತ ಸೇವೆಯನ್ನು ನೀಡಲು ಮುಂದಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಎಸ್‌ಸಿಡಿಸಿಸಿ ಪ್ರಧಾನ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ರೈತ ಸ್ಪಂದನ ಕಾರ್ಯಕ್ರಮದ ಮೂಲಕ ಕೃಷಿಕರಿಗೆ ವಿವಿಧ ರೀತಿಯ ಸಾಲ ವಿತರಿಸುವ ಸಮಾರಂಭವು ಜುಲೈ 14ರಂದು ಪೂರ್ವಾಹ್ನ11.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಕೋವಿಡ್ ಸಂಕಷ್ಟ ಸಮಯದಲ್ಲಿ ರೈತರಿಗೆ ಹಾಗೂ ಗ್ರಾಹಕರಿಗೆ ವಿಶಿಷ್ಟ ರೀತಿಯ ಸಾಲ ಸೌಲಭ್ಯವನ್ನು ನೀಡಲು ಬ್ಯಾಂಕ್ ಮುಂದಾಗಿದೆ. ಚಿನ್ನಾಭರಣ ಈಡಿನ ಸಾಲದ ಬಡ್ಡಿದರ ಇಳಿಕೆ ಮಾಡಲಾಗಿದ್ದು, ತಿಂಗಳ ಬಡ್ಡಿ ಕೇವಲ ಶೇ. ೦.75% ಆಗಿದೆ. ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ವಾಹನಗಳ ಖರೀದಿಗೆ ಬ್ಯಾಂಕ್ ಉತ್ತೇಜನವನ್ನು ನೀಡಲು ಮುಂದಾಗಿದ್ದು, ಇಲೆಕ್ಟ್ರಿಕ್ ಸ್ಕೂಟರ್ ಹಾಗೂ ಇಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಸಾಮಾನ್ಯ ವಾಹನ ಸಾಲ ಬಡ್ಡಿಯಲ್ಲಿ ಶೇ.1.00 ರ ರಿಯಾಯಿತಿ ನೀಡಲಾಗುವುದು.

ಬ್ಯಾಂಕ್ ಕಳೆದ ವರ್ಷವೂ ಕೋವಿಡ್ ಸಮಯದಲ್ಲಿ ವಿವಿಧ ರೀತಿಯ ಸಮಾಜಮುಖಿ ಸೇವೆಯಲ್ಲಿ ಗುರುತಿಸಿಕೊಂಡಿದೆ. ಮುಖ್ಯವಾಗಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಹಾಗೂ ರೂ. 3,000/- ಸಹಾಯಧನವನ್ನು ನೀಡಿದ ಮೊದಲ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಬ್ಯಾಂಕ್ ಪಾತ್ರವಾಗಿದೆ.

ಬ್ಯಾಂಕಿನ ಈ ಸಮಾಜಮುಖಿ ಸ್ಪಂದನೆಯನ್ನು ಗುರುತಿಸಿ ನಂತರ ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಿದೆ. ಹೀಗೆ ಪ್ರತೀ ಹಂತದಲ್ಲೂ ಬ್ಯಾಂಕ್ ತನ್ನ ಸೇವಾ ಬದ್ಧತೆಯನ್ನು ಮೆರೆದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ.

ಈಗಾಗಲೇ ಪ್ರತೀ ಜಿಲ್ಲೆಯಲ್ಲೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಮೂಲಕ ರೈತ ಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸುವ ಸೂಚನೆಯನ್ನು ನೀಡಿರುವ ರಾಜ್ಯ ಸರಕಾರದ ಮಾನ್ಯ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಟಿ. ಸೋಮಶೇಖರ್ ಅವರು ಈ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ರೈತ ಸ್ಪಂದನದ ಮೂಲಕ ಕೃಷಿಕರಿಗೆ, ಮೀನುಗಾರರಿಗೆ, ಹೈನುಗಾರಿಕಾ ಫಲಾನುಭವಿಗಳಿಗೆ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಿಸುವ ಕಾರ್ಯಕ್ರಮ ಇದಾಗಿದೆ ಎಂದವರು ವಿವರಿಸಿದರು.

ಮಂಗಳೂರಿನಲ್ಲಿ ನಡೆಯುವ ರೈತ ಸ್ಪಂದನ ಕಾರ್ಯಕ್ರಮವನ್ನು ಸಹಕಾರ ಸಚಿವ ಶ್ರೀ ಎಸ್.ಟಿ. ಸೋಮಶೇಖರ್ ಅವರು ಉದ್ಘಾಟಿಸಿ, ಫಲಾನುಭವಿ ರೈತರಿಗೆ ಕೃಷಿ ಸಾಲ ವಿತರಿಸಲಿರುವರು.

ಈ ಕಾರ್ಯಕ್ರಮದಲ್ಲಿ ಮೀನುಗಾರರಿಗೆ ಸಾಲ ವಿತರಣೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‌ಕುಮಾರ್ ಕಟೀಲ್ ನೆರವೇರಿಸಲಿರುವರು.

ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಣೆಯನ್ನು ಕರ್ನಾಟಕ ಸರಕಾರದ ಮಾನ್ಯ ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಲಿರುವರು.

ಪ್ರಧಾನ ಮಂತ್ರಿ ಸ್ವ-ನಿಧಿ ಸಾಲ ವಿತರಣೆಯನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ., ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಬೆಳ್ಳಿ ಪ್ರಕಾಶ್ ಅವರು ನೆರವೇರಿಸಲಿರುವರು.

ಹೈನುಗಾರಿಕಾ ಫಲಾನುಭವಿಗಳಿಗೆ ಸಾಲ ವಿತರಣೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಯು.ಟಿ. ಖಾದರ್ ಅವರು ನೆರವೇರಿಸಲಿರುವರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಡಿ. ಕಾಮತ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ| ಭರತ್ ಶೆಟ್ಟಿ ವೈ., ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ ಹಾಗೂ ಸಹಕಾರ ಸಂಘಗಳ ನಿಬಂಧಕರಾದ ಶ್ರೀ ಎಸ್. ಜಿಯಾವುಲ್ಲಾ ಭಾಗವಹಿಸಲಿರುವರು ಎಂದು ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಬಿ.ನಿರಂಜನ್, ಟಿ.ಝಿ.ರಾಜಾರಾಮ್ ಭಟ್, ಎಮ್ ವಾದಿರಾಜ್ ಶೆಟ್ಟಿ, ಸದಾಶಿವ ಉಳ್ಳಾಲ್, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ, ರಾಜೇಶ್ ರಾವ್, ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರ್, ಕೆ.ಹರಿಶ್ಚಂದ್ರ, ಎಮ್. ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಬ್ಯಾಂಕಿನ ಸಿಇಓ ಬಿ.ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.

Comments are closed.