
ಮಂಗಳೂರು: ನೀರುಮಾರ್ಗ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಸಾರ್ವಜನಿಕ ಸೇವೆಗೆ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ನೀರುಮಾರ್ಗ ಜಂಕ್ಷನ್ ಬಳಿ ನೆರವೇರಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು, “ಜನರ ಸೇವೆಯನ್ನು ಮಾಡುವ ಉದ್ದೇಶದಿಂದ ನೀರುಮಾರ್ಗ ಭಾಗದ ಮುಖಂಡರು ಒಟ್ಟು ಸೇರಿ ನಿರ್ಧರಿಸಿದಂತೆ ಇಲ್ಲಿ ಸಾರ್ವಜನಿಕ ಸೇವೆಗಾಗಿ ಆಂಬುಲೆನ್ಸ್ ಲೋಕಾರ್ಪಣೆಗೊಂಡಿದೆ.
ಜನಸೇವೆ ಮಾಡಲು ಅಧಿಕಾರವಲ್ಲ, ಮಾನವೀಯತೆ ಮಾತ್ರ ಮುಖ್ಯವಾಗುತ್ತದೆ. ಈ ಭಾಗದ ಪುಟ್ಟ ಬಾಲಕಿ ಕ್ಲಾವಿಯ ಅಗ್ನೇಲ್ ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದು ಅವಳ ಹೆತ್ತವರ ಆಸೆಯಂತೆ ಇಲ್ಲಿ ಆಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದೆ.
ಇಲ್ಲಿನ ಜನರು ಜಾತಿಮತ ಬೇಧವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟು ಪಂಚಾಯತ್ ನಲ್ಲಿ ಅಧಿಕಾರ ನೀಡಿದ್ದಾರೆ. ಇದಕ್ಕೆ ಕಾರಣ ಜನರಿಗೆ ನೀಡುತ್ತಿರುವ ನಿಸ್ವಾರ್ಥ ಸೇವೆ. ನನ್ನನ್ನು ಈ ಭಾಗದಲ್ಲಿ ಹೆಚ್ಚಿನ ಮತ ಕೊಟ್ಟು ಜನರು ಹಿಂದೆ ಬೆಂಬಲಿಸಿದ್ದರು.
ನೀರುಮಾರ್ಗದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಜನರಿಗೆ ನೆರವು ನೀಡುವ ಉದ್ದೇಶದಿಂದ ತಿಂಗಳ ಹಿಂದೆ ಆಂಬುಲೆನ್ಸ್ ಸೇವೆ ಪ್ರಾರಂಭ ಮಾಡಿದ್ದೆವು. ಬಡವರ್ಗದ ಜನರು ತುರ್ತು ಸಂದರ್ಭದಲ್ಲಿ ಸಮಸ್ಯೆ ಎದುರಿಸಬಾರದು ಎಂಬ ದೃಷ್ಟಿಯಿಂದ ಈ ಸೇವೆಯನ್ನು ಪ್ರಾರಂಭ ಮಾಡುತ್ತಿದ್ದೇವೆ. ಅಧಿಕಾರ ಇದ್ದಾಗ ಮಾತ್ರ ಜನರ ಜೊತೆಯಿದ್ದರೆ ಸಾಲದು. ಅಧಿಕಾರ ಇಲ್ಲದೇ ಇದ್ದರೂ ಜನರ ಜೊತೆ ನಿಲ್ಲಬೇಕು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರು, “ಕಾಂಗ್ರೆಸ್ ಪಕ್ಷ ಅನೇಕ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ 20 ಕಡೆಗಳಲ್ಲಿ ರಕ್ತದಾನ ಮಾಡಿ 2500 ಯುನಿಟ್ ರಕ್ತ ಸಂಗ್ರಹ ಮಾಡಿದ್ದಲ್ಲದೆ ಆಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಜನರಿಗೆ ನೆರವಾಗಿದೆ.
ಕೋವಿಡ್ ಯಾರನ್ನೂ ಬಿಟ್ಟಿಲ್ಲ ಇದರಿಂದ ನಾವು ಹೆಚ್ಚು ಜಾಗರೂಕರಾಗಿದ್ದೇವೆ. ದೇಶದಲ್ಲಿ ಲಕ್ಷಾಂತರ ಮಂದಿ ಬಲಿಯಾದರು. ಸಕಾಲದಲ್ಲಿ ಚಿಕಿತ್ಸೆ ಸಿಗದೇ ಜನರು ಆಸ್ಪತ್ರೆ ದಾರಿಯಲ್ಲಿ ಪ್ರಾಣಬಿಟ್ಟರು. ಹೀಗಾಗಿ ಇಂತಹ ಸೋಂಕನ್ನು ಹತ್ತಿಕ್ಕಲು ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ಆಂಬುಲೆನ್ಸ್ ಸೇವೆಯನ್ನು ಒದಗಿಸಿದ್ದಾರೆ. ಇದಕ್ಕೆ ಕೈಜೋಡಿಸಿದ ಎಲ್ಲರೂ ಅಭಿನಂದನಾರ್ಹರು” ಎಂದರು.
“ಇಂತಹ ಕೆಲಸ ಕಾಂಗ್ರೆಸ್ ಪಕ್ಷ ಎಲ್ಲ ಕಡೆ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಏಳು ಕಡೆ ಕೊರೋನ ಕೇರ್ ಸೆಂಟರ್ ಮಾಡುವ ಮೂಲಕ ಜನರ ಪರ ನಿಂತಿದೆ. ಆರೋಗ್ಯ ಭಾಗ್ಯ ಎಲ್ಲರಿಗೂ ಅಗತ್ಯ. ಹೀಗಾಗಿ ಇಂತಹ ಕಾರ್ಯಕ್ಕೆ ಜನರ ಸಹಕಾರ ಬೇಕು” ಎಂದು ಕಾಂಗ್ರೆಸ್ ಗುರುಪುರ ವಲಯ ಅಧ್ಯಕ್ಷ ಸುರೇಂದ್ರ ಕಂಬಳಿ ಹೇಳಿದರು.
ಸಮಾರಂಭದಲ್ಲಿ ಧಾರ್ಮಿಕ ಗುರು ಫಾ. ಜೋಸೆಫ್ ಮಸ್ಕರೇನಸ್, ಧರ್ಮಗುರು ಜಿ ಐ ಎಸ್ ಇಸ್ಮಾಯಿಲ್, ಸಮಾಜ ಸೇವಕ ಎಮ್ ಪ್ರೇಮಚಂದ್ರ ಭಟ್, ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನವತಿ, ನೀರುಮಾರ್ಗ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ ಜೆ ಸಾಲ್ಯಾನ್ ಉಪಸ್ಥಿತರಿದ್ದರು.
Comments are closed.