ಕರಾವಳಿ

ಉಡುಪಿ ಜಿಲ್ಲೆ ತೆಕ್ಕಟ್ಟೆಯಲ್ಲಿ ಚಿರತೆ ಸೆರೆಗೆ ಬೋನಿಟ್ಟ ಅರಣ್ಯ‌ ಇಲಾಖೆ…!

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಬೋನಿಟ್ಟು ಕಾರ್ಯಾಚರಣೆಗೆ ಮುಂದಾಗಿದೆ.

ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಇರುವ ಪರಿಸರದ ಪಕ್ಕದ ತೋಪಿನ ಸಮೀಪದಲ್ಲಿ‌ ಕಳೆದ ಒಂದೂವರೆ ವರ್ಷದ ಬಳಿಕ ಮತ್ತೆ ಚಿರತೆ ಕಾಟ ಹೆಚ್ಚಿದ್ದು ಜು.5 ಸೋಮವಾರ ಮನೆಯೊಂದರ ಬಳಿ ಹಾಡುಹಗಲೇ ನುಗ್ಗಿದ ಚಿರತೆ ಸಾಕು ನಾಯಿಗೆ ದಾಳಿ ಮಾಡಿದ್ದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿತ್ತು. ತೆಕ್ಕಟ್ಟೆ ಸಮೀಪದ ಮಾಲಾಡಿಯ ತೋಪಿನಿಂದ ಮುಂದೆ ಸಾಗಿದಾಗ ಸಿಗುವ ಮನೆಯಾದ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗರ ಪತಿ ಸುರೇಶ್ ದೇವಾಡಿಗರ ನಿವಾಸದ ಎದುರು ಪ್ರತ್ಯಕ್ಷವಾದ ಚಿರತೆ ಅವರ ಮನೆ ಸಾಕು ನಾಯಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಇಲಾಖೆಯವರು‌ ತೋಪಿನಲ್ಲಿ ಬೋನು ಇಟ್ಟಿದ್ದು ಇಲ್ಲಿನ ನಿವಾಸಿ ಸುರೇಶ್ ದೇವಾಡಿಗ, ಅವರ ಸಹೋದರ ಸತೀಶ್ ದೇವಾಡಿಗ ಬೋನಿಗೆ ನಾಯಿ ಕಟ್ಟಿ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

ಇದೇ ತೋಪಿನಲ್ಲಿ ಒಂದೂವರೆ ವರ್ಷದ ಹಿಂದಿನ ಅವಧಿಯಲ್ಲಿ 4 ಚಿರತೆ ಸೆರೆಯಾಗಿದ್ದು ಈ ಕಾರ್ಯಾಚರಣೆಗೆ ಇಂದು ದಾಳಿಗೊಳಗಾದ ನಾಯಿ ಮಾಲಿಕರಾದ ಹಾಗೂ ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ನಿತ್ಯ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಚಿರತೆ ಸೆರೆಗೆ ಸಹಕಾರ ನೀಡುತ್ತಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.