ಕರಾವಳಿ

ದ.ಕ.ಜಿಲ್ಲೆ : ಪೊಲೀಸರು ವಶಪಡಿಸಿಕೊಂಡಿದ್ದ ಗಾಂಜಾ, ಕೊಕೇನ್ ಎಂಡಿಎಂಎ, ಎಲ್ಎಸ್ಡಿ ಚರಸ್ ನಾಶ

Pinterest LinkedIn Tumblr

ಮಂಗಳೂರು, ಜೂನ್.26: ಮಂಗಳೂರು ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 354 ಕೆಜಿ ಮಾದಕ ವಸ್ತುಗಳನ್ನು ಮೂಲ್ಕಿ ಕೊಲ್ನಾಡ್ ಜಂಕ್ಷನ್ ಸಮೀಪದ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನಲ್ಲಿ ಶನಿವಾರ ನಾಶಪಡಿಸಲಾಯಿತು.

ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 130 ಕೆಜಿ ಗಾಂಜಾ, 68 ಗ್ರಾಂ ಎಂಡಿಎಂಎ, 41 ಸ್ಟ್ರಿಪ್ ಎಲ್ಎಸ್ ಡಿ, 18 ಎಂಎಲ್ ಕೊಕೇನ್ ಮತ್ತು 18 ಗ್ರಾಂ ಬ್ರೌನ್ ಶುಗರ್ ಸೇರಿ ಸುಮಾರು 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಿಲೇವಾರಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾನೆ ಅವರ ಮಾರ್ಗದರ್ಶನದಲ್ಲಿ 25,11,080 ರೂ.ಗಳ 221.9 ಕೆಜಿ ಗಾಂಜಾವನ್ನು ವಿಲೇವಾರಿ ಮಾಡಲಾಗಿದ್ದು, ಇದನ್ನು ಜಿಲ್ಲಾ ಮಿತಿ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿತ್ತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು, ಅಂತರ್ ರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ಜೂ. 26 ರಂದು ಮಂಗಳೂರು ಪೊಲೀಸ್ ಕಮಿಷನರೆಟ್ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ಗಾಂಜಾ, ಕೊಕೇನ್ ಎಂಡಿಎಂಎ, ಎಲ್ಎಸ್ಡಿ ಚರಸ್ ಮುಂತಾದ ಮಾದಕ ವಸ್ತುಗಳನ್ನು ಮುಲ್ಕಿಯ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಘಟಕವಾದ ಮೆ|| ರಾಮ್ಕಿ ಎನರ್ಜಿ ಮತು ಎನ್ವಿ ರೋನ್‌ಮೆಂಟ್ ಲಿ. ರವರಿಗೆ ಹಸ್ತಾಂತರಿಸಿ ನಾಶಪಡಿಸಲಾಯಿತು ಎಂದು ಹೇಳಿದರು.

ವಿಲೇವಾರಿಯ ಸಲುವಾಗಿ ಬಾಕಿ ಇರುವ ಮಾದಕ ವಸ್ತುಗಳ ನ್ನು ವಿಲೇವಾರಿಗೊಳಿಸುವ ಸಂಬಂಧ ನ್ಯಾಯಾಲಯದಿಂದ ಆದೇಶ ಪಡೆಯಲಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳಲ್ಲಿ, ಸುಮಾರು 10 ಲಕ್ಷ ಮೌಲ್ಯದ 130 ಕೆಜಿ ಗಾಂಜಾ, 68 ಗ್ರಾಂ ಎಂಡಿಎಂಎ, 41 ಸ್ಟ್ರಿಪ್ ಎಲ್ಎಸ್ಡಿ, 18 ಎಂಎಲ್ ಕೊಕೇನ್ ಮತ್ತು 18 ಗ್ರಾಂ ಬ್ರೌನ್ ಶುಗರ್ ಯನ್ನು ವಶಪಡಿಸಿಕೊಳ್ಳಲಾಗಿತ್ತು. 2021 ರಲ್ಲಿ ಮಾದಕ ವಸ್ತುಗಳ ಮಾರಾಟಮಾಡುತ್ತಿದ್ದ ಮತ್ತು ಮಾದಕ ದ್ರವ್ಯ ಸೇವಿಸುತ್ತಿದ್ದ ಸುಮಾರು 214 ಪ್ರಕರಣಗಳನ್ನು ಭೇದಿಸಿದ್ದೇವೆ ಎಂದು ಹೇಳಿದರು.

50 ಪ್ರಕರಣಗಳಲ್ಲಿ 130 ಕೆ.ಜಿ.ಗೂ ಆಧಿಕ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಗಾಂಜಾ ಪ್ರಮಾಣವೇ ಅಧಿಕವಿದೆ. ಎಲ್‌ಎಸ್‌ಡಿ, ಎಂಡಿಎಂಎ, ಕೊಕೇನ್, ಬ್ರೌನ್ ಶುಗರ್ ಒಳಗೊಂಡಿದೆ ಎಂದರು.

ಮಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ. ಮಾದಕ ದ್ರವ್ಯ ಜಾಲವು ಯುವ ಜನಾಂಗವನ್ನೇ ಗುರಿಯಾಗಿಸಿಕೊಂಡಿದೆ.

ಯುವಶಕ್ತಿಯನ್ನು ಉಳಿಸುವುದು ಎಲ್ಲರ ಜವಾಬ್ದಾರಿ. ಮಾದಕ ದ್ರವ್ಯ ಮಾರಾಟ, ಸೇವನೆ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಈ ಸಂದರ್ಭ ಮಾಹಿತಿ ನೀಡುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಎನ್.‌ಶಶಿಕುಮಾರ್ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮಾತನಾಡಿ, ಎಸ್ಪಿ ವ್ಯಾಪ್ತಿಯಲ್ಲಿ 224 ಕೆ.ಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ 214 ಪ್ರಕರಣ ದಾಖಲಾಗಿವೆ , ‘ಕಳೆದ ನಾಲ್ಕು ವರ್ಷಗಳಲ್ಲಿ ಮಾದಕ ದ್ರವ್ಯ ನಿಗ್ರಹ ಕಾಯ್ದೆಯಡಿ 89 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ 153 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು 383 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಎಸ್ಪಿ ಭಾಸ್ಕರ್ ವಿ.ಬಿ., ಬಂಟ್ವಾಳ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜ, ಡಿಸಿಆರ್‌ಬಿ ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.‌ಕುಮಾರ್, ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನ ಇನ್‌ಚಾರ್ಜ್ ಪ್ರಶಾಂತ್ ಹಾಜರಿದ್ದರು.

Comments are closed.