ಉಡುಪಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಒಟ್ಟು 1.28 ಕೋಟಿ ರೂ. ಮೌಲ್ಯದ ಗಾಂಜಾ ಹಾಗೂ ಮತ್ತಿತರ ಡ್ರಗ್ಸ್ಗಳನ್ನು ಇಂದು ನಾಶಪಡಿಸಲಾಯಿತು. ಅಂತರಾಷ್ಟ್ರೀಯ ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಈ ಕಾರ್ಯಾಚರಣೆ ನಡೆದಿದೆ.

30,13,100 ರೂ. ಬೆಲೆಯ 103 ಕೆ.ಜಿ ಗಾಂಜಾ, 9,82,500 ರೂ. ಬೆಲೆಯ ಹೈಡ್ರೋವೀಡ್ ಗಾಂಜಾ, 30,33,000 ರೂ. ಬೆಲೆಯ ಎಂ.ಡಿ.ಎಂ.ಎ ಮಾತ್ರೆಗಳು, 30 ಲಕ್ಷ ರೂ. ಬೆಲೆಯ ಎಲ್.ಎಸ್.ಡಿ ಸ್ಟಿಪ್ಸ್ ಸೇರಿ ಒಟ್ಟು 1,00,28,600 ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ಜಿಲ್ಲಾ ಡ್ರಗ್ ವಿಲೇವಾರಿ ಸಮಿತಿಯ ಅಧ್ಯಕ್ಷರು ಹಾಗೂ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಸಮಿತಿಯ ಸದಸ್ಯರಾದ ಸುಧಾಕರ್ ಸದಾನಂದ ನಾಯ್ಕ್, ಉಡುಪಿ ಉಪವಿಭಾಗ ಹಾಗೂ ಎಸ್. ವಿಜಯ ಪ್ರಸಾದ್, ಕಾರ್ಕಳ ಉಪವಿಭಾಗರವರ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.
ವಿಲೇವಾರಿಗೊಳಿಸಲಾದ ಪ್ರಕರಣಗಳಲ್ಲಿ ಮಣಿಪಾಲ ಠಾಣೆಯ 12 ಪ್ರಕರಣ, ಉಡುಪಿ ನಗರ ಠಾಣೆಯ 10 ಪ್ರಕರಣ, ಸೆನ್ ಅಪರಾಧ ಠಾಣೆಯ 8 ಪ್ರಕರಣ, ಕುಂದಾಪುರ ಠಾಣೆಯ 6 ಪ್ರಕರಣ, ಕಾಪು ಠಾಣೆಯ 5 ಪ್ರಕರಣ, ಮಲ್ಪೆ, ಕುಂದಾಪುರ ಗ್ರಾಮಾಂತರ ಹಾಗೂ ಪಡುಬಿದ್ರೆ ಠಾಣೆಯ ತಲಾ 2 ಪ್ರಕರಣ ಹಾಗೂ ಗಂಗೊಳ್ಳಿ, ಹಿರಿಯಡ್ಕ ಮತ್ತು ಶಿರ್ವಾ ಠಾಣೆಯಿಂದ ತಲಾ 1 ಪ್ರಕರಣ ಒಟ್ಟು 50 ಪ್ರಕರಣ ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಎಸ್ಪಿ ವಿಷ್ಣುವರ್ಧನ್, ಎ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಪ್ರಮೋದ್ ಕುಮಾರ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ್ ,ಕಾರ್ಕಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್, ವೃತ್ತ ನಿರೀಕ್ಷಕರಾದ ಮಂಜುನಾಥ್, ಸಂಪತ್, ಮಂಜುನಾಥ ಗೌಡ, ಪ್ರಮೋದ್ ಹಾಗೂ ವಿವಿಧ ಠಾಣೆ ಪಿಎಸ್ಐ, ಸಿಬ್ಬಂದಿ ಉಪಸ್ಥಿತರಿದ್ದರು.
Comments are closed.