ಕರಾವಳಿ

ನೆರೆಹಾವಳಿ ಹಾನಿ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚನೆ

Pinterest LinkedIn Tumblr

ಮಂಗಳೂರು, ಜೂನ್ 20 : ಮಳೆಯಿಂದ ಉಂಟಾಗುವ ನೆರೆ, ಪ್ರವಾಹ ಸಮಯದಲ್ಲಿ ಅನಾಹುತ ದಿಂದ ಸಾವು ನೋವು ಉಂಟಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದರು.

ಅವರು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುವ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡುತ್ತಿದ್ದರು.

ರಾಜ್ಯದ ಕೆಲವು ಜಿಲ್ಲೆಗಳು ಕಳೆದ ಮೂರು ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ, ಸಂಕಷ್ಟ ಎದುರಿಸುತ್ತಿದ್ದೇವೆ. ಆದ್ದರಿಂದ ಇಂತಹ ಹಾನಿಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.

ಈಗಾಗಲೇ ನಾಲ್ಕು ಜಿಲ್ಲೆಗಳಿಗೆ ಎನ್‍ಡಿಆರ್‍ಎಫ್ ತಂಡಗಳನ್ನು ಕಳುಹಿಸಲಾಗಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲಾ ರೀತಿಯ ಸನ್ನದ್ದು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿರ್ದೇಶನ ನೀಡಿದರು.

ಅಗತ್ಯವಿರುವೆಡೆ ಪರಿಹಾರ ಕೇಂದ್ರಗಳನ್ನು ತೆರೆದು ಸ್ಥಳಾಂತರಿಸುವುದು, ವೈದ್ಯಕೀಯ ಸವಲತ್ತು ಕಲ್ಪಿಸುವುದು, ಸಂಪನ್ಮೂಲಗಳನ್ನು ಕ್ರೋಢೀಕರಣ ಮಾಡಿಕೊಳ್ಳುವುದು ಮತ್ತಿತರ ಅಗತ್ಯ ತಯಾರಿ ಇರಬೇಕು. ಯಾವುದೇ ರೀತಿಯ ಹಾನಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ವಿಪತ್ತು ಕಾರ್ಯಗಳನ್ನು ಕೈಗೊಳ್ಳಲು ತಂಡಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದರ ಜೊತೆಗೆ ಪೂರ್ವಭಾವಿ ಸಭೆಗಳನ್ನು ಮಾಡಿ ಅವರುಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.

ನೆರೆಯಿಂದ ಜಿಲ್ಲೆಯ ಸಸಿಹಿತ್ಲು ಉಳ್ಳಾಲ ಸೋಮೇಶ್ವರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಕಡಲಕೊರೆತೆ ಉಂಟಾಗಿದೆ ಎಂದ ಅವರು ಕಡಲಕೊರೆತ ನಿವಾರಣೆಗೆ ತಡೆಗೋಡೆಗಳನ್ನು ನಿರ್ಮಾಣ ಮಾಡುವ ಕಾರ್ಯಗಳು ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕಳೆದ ತಿಂಗಳು ಕಂದಾಯ ಸಚಿವರು ನೆರೆ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಇವುಗಳ ಸ್ಥಳ ಭೇಟಿ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ತಿಳಿಸಿದ್ದಾರೆ ಎಂದರು.

ಚಂಡಮಾರುತದಿಂದ ತೊಂದರೆಗೊಳಗಾದವರಿಗೆ ಆಶ್ರಯ ನೀಡಲು ಕುಳಾಯಿಯಲ್ಲಿ ಮಲ್ಟಿಪರ್ಪಸ್ ಸೈಕ್ಲೋನ್ ಶೆಲ್ಟರ್ ಕೇಂದ್ರವನ್ನು ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅದನ್ನು ಶೀಘ್ರದಲ್ಲಿಯೇ ಮಂಜೂರಾತಿ ನೀಡಬೇಕೆಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಮಾತನಾಡಿ ಜನವರಿಯಿಂದ ಈವರೆಗೆ 707 ಮಿಲಿ ಮೀಟರ್‍ನಷ್ಟು ಮಳೆಯಾಗಿ ವಾಡಿಕೆ ಗಿಂತ ಶೇಕಡಾ 58 ರಷ್ಟು ಹೆಚ್ಚು ಮಳೆಯಾಗಿದೆ, ಬೇಸಿಗೆಯಲ್ಲೂ ಸಹ ಉತ್ತಮ ಮಳೆಯಾಗಿ ನೀರಿನ ಸಮಸ್ಯೆ ಯಾಗಿರುವುದಿಲ್ಲ ಎಂದರು .

ನೇತ್ರಾವತಿ ನದಿಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವಂತಹ 48 ಗ್ರಾಮಪಂಚಾಯಿತಿಗಳನ್ನು ಈಗಾಗಲೇ ಗುರುತಿಸಲಾಗಿದೆ ನೆರೆಯಿಂದ ದುರಂತ ಸಂಭವಿಸುವುದನ್ನು ತಡೆಯಲು ತಂಡಗಳನ್ನು ರಚಿಸಲಾಗಿದೆ ಎಂದರು.
380 ಹೋಂಗಾರ್ಡ್ ಗಳನ್ನು ಬೀಚ್‍ಗಳಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. .

ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರ ಮನೆಗಳಿಗೆ ನೀರು ನುಗ್ಗುವ ಸಂಭವವಿದ್ದಲ್ಲಿ ಅವರನ್ನು ಸ್ಥಳಾಂತರಿಸಲು ಕಾಳಜಿ ಕೇಂದ್ರಗಳನ್ನು ತೆರೆಯಲು ಗುರುತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು 25 ಕೋಟಿ ರೂಗಳಷ್ಟು ವಿಪತ್ತು ನಿಧಿ ಇದೆ ಎಂದ ಅವರು ಮಳೆಯಿಂದ ಹಾನಿಗೊಳಗಾದ 26 ಮನೆಗಳಿಗೆ ಎನ್. ಡಿ.ಆರ್. ಅಫ್ ಮಾರ್ಗಸೂಚಿಯನ್ವಯ ಪರಿಹಾರ ನೀಡಲಾಗಿದೆ ಎಂದರು

ಸಭೆಯಲ್ಲಿ ಶಾಸಕ ಭರತ್ ವೈ ಶೆಟ್ಟಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಪೋಲಿಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.