ಕರಾವಳಿ

ಸಾಮಥ್ಯ೯ ಇದ್ದವರು ಇಲ್ಲದವರಿಗೆ ಸಹಾಯ ಮಾಡಿ : ನಾಟಕ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್

Pinterest LinkedIn Tumblr

ಮಂಗಳೂರು, ಜೂನ್.13 : ತುಳು ನಾಟಕ ಕಲಾವಿದರ ಒಕ್ಕೂಟ(ರಿ.) ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್, ಫ್ರೆಂಡ್ಸ್ ತುಳುವೆರ್ ಕುವೈಟ್ ಇದರ ಸಂಯುಕ್ತ ಆಶ್ರಯದಲ್ಲಿ ನಾಟಕ ಕಲಾವಿದರಿಗೆ ಆಹಾರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಶನಿವಾರ  ಕದ್ರಿಯ ಗೋಕುಲ್ ಸಭಾಭವನದಲ್ಲಿ ಜರುಗಿತು.

ಈ ವೇಳೆ ಮಾತಾಡಿದ ಪೋಲಿಸ್ ಕಮಿಷನರ್ ಎನ್. ಶಶಿಕುಮಾರ್ ಅವರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ಎನ್ನುವಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಇಲ್ಲಿನ ಕಲಾಪೋಷಕರು ಕೂಡ ಕಲಾವಿದರ ಜೊತೆಯಲ್ಲಿದ್ದಾರೆ. ಇದೊಂದು ಮಹಾಮಾರಿಯ ಸಂದರ್ಭದಲ್ಲಿ ನಾವು ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಂಘರ್ಷವಾಗಿದೆ. ನಮ್ಮ ಸ್ನೇಹಿತರು, ಬಂಧುಗಳನ್ನು ಕಳೆದುಕೊಂಡಿದ್ದೇವೆ. ದಿನಗೂಲಿ ಕಾರ್ಮಿಕರು, ಸಣ್ಣ ಸಣ್ಣ ಕೆಲಸ ಮಾಡುವವರು, ಕಲಾವಿದರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ.

ಶಿಕ್ಷಣ ಸಂಸ್ಥೆಗಳು ಭಾರೀ ಹಿನ್ನಡೆಯನ್ನು ಅನುಭವಿಸಿವೆ. ಎಲ್ಲರೂ ಸಂತೋಷವಾಗಿದ್ದಾಗ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಈಗ ಎಲ್ಲರೂ ದುಃಖದಲ್ಲಿದ್ದಾಗ ಕಲಾವಿದರು ಮಾಡುವುದಾದರೂ ಏನು? ಕೊರೋನಾ ಮಹಾಮಾರಿಯ ಈ ಸಂದರ್ಭದಲ್ಲಿ ಇಂತಹ ಕಲಾವಿದರನ್ನು ರಕ್ಷಿಸುವ ಸಂಘಟನೆಗಳು ಇನ್ನಷ್ಟು ಬೆಳೆಯಬೇಕು. ಜಾತಿ ಧರ್ಮ ರಾಜಕೀಯ ಬಿಟ್ಟು ಮನುಷ್ಯತ್ವಕ್ಕೆ ಬೆಲೆ ಸಿಗುವ ಸಮಯ ಇದು. ಹೀಗಾಗಿ ಸಾಮರ್ಥ್ಯ ಇದ್ದವರು ಇಲ್ಲದವರಿಗೆ ತಮ್ಮಿಂದಾದ ಸಹಾಯ ಮಾಡಿಕೊಂಡು ಬನ್ನಿ. ಇದು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮನ್ನು ಕಾಯುತ್ತದೆ” ಎಂದು ಹೇಳಿದರು.

ಪ್ರಸ್ತಾವಿಕ ಮಾತಾಡಿದ ಹಿರಿಯ ರಂಗಕರ್ಮಿ ಲಕ್ಷ್ಮಣ ಕುಮಾರ್ ಮಲ್ಲೂರು ಅವರು, “ಯಕ್ಷಗಾನ ಕಲಾವಿದರು ಹಿಂದೆ ಬಹಳಷ್ಟು ಸಂಕಷ್ಟದಲ್ಲಿದ್ದರು. ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನವಿಲ್ಲದೆ ಕಲಾವಿದರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದರು. ಈ ವೇಳೆ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆ ಮಾಡುವ ಮೂಲಕ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರಿಗೆ ಬೆನ್ನೆಲುಬಾಗಿ ನಿಂತರು.

ಈಗ ಯಕ್ಷಗಾನ, ನಾಟಕ ಕಲಾವಿದರು ನೆಮ್ಮದಿಯಿಂದ ಇರಬೇಕಾದರೆ ಪಟ್ಲ ಫೌಂಡೇಶನ್ ಟ್ರಸ್ಟ್ ಕಾರಣ. ಕಳೆದ ಬಾರಿ ಲಾಕ್ ಡೌನ್ ನಲ್ಲೂ ಸುಮಾರು 300 ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸಿದ್ದು ಈ ಬಾರಿ ಮತ್ತೆ ಅದನ್ನು ಇತರ ಸಂಘಟನೆಗಳ ಸಹಯೋಗದಲ್ಲಿ ಮುಂದುವರಿದಿದೆ” ಎಂದರು.

ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಲಯನ್ ಕಿಶೋರ್ ಡಿ ಶೆಟ್ಟಿ, ಲಯನ್ಸ್ ಉಪ ರಾಜ್ಯಪಾಲ ವಸಂತ ಶೆಟ್ಟಿ, ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ ಡಾ. ಮನು ರಾವ್, ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ರವಿಚಂದ್ರ ಶೆಟ್ಟಿ ಅಶೋಕ‌ನಗರ, ಗೋಕುಲ್ ಕದ್ರಿ, ಪ್ರದೀಪ್ ಆಳ್ವ, ತಾರಾನಾಥ್ ಶೆಟ್ಟಿ ಬೋಳಾರ, ಲಕ್ಷ್ಮಣ ಕುಮಾರ್ ಮಲ್ಲೂರು, ಕ್ಯಾಟ್ಕಾ ಅಧ್ಯಕ್ಷ ಮೋಹನ್ ಕೊಪ್ಪಲ, ಮಧು ಸುರತ್ಕಲ್, ಗೋವರ್ಧನ್ ಶೆಟ್ಟಿ, ಶ್ರೀಮತಿ ಸ್ವರೂಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನವನೀತ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು.

Comments are closed.